Do you have any queries?

or Call us now at 9982-782-555

basket icon
Basket
(0 items)
back-arrow-image Search Health Packages, Tests & More

Language

ಋತುಸ್ರಾವಕ್ಕೂ ಮೊದಲು ಬಿಳಿ ಸ್ರಾವ: ಇದು ಸಹಜವೇ? ಕಾರಣಗಳು ಮತ್ತು ಪರಿಹಾರಗಳು

Last Updated On: Nov 28 2025

ಋತುಸ್ರಾವದ ಮೊದಲು ಬಿಳಿ ಸ್ರಾವ ಅನೇಕ ಮಹಿಳೆಯರಲ್ಲಿ ಕಂಡುಬರುವ ಒಂದು ಸಾಮಾನ್ಯ ಸಂಗತಿಯಾಗಿದೆ ಮತ್ತು ಇದು ಸಾಮಾನ್ಯವಾಗಿ ಋತುಚಕ್ರದ ಸಹಜ ಭಾಗವೇ ಆಗಿರುತ್ತದೆ. ಆದರೆ, ಕೆಲವೊಮ್ಮೆ ಇದು ಗರ್ಭಾವಸ್ಥೆ ಅಥವಾ ಇನ್ ಫೆಕ್ಷನ್ ಉಂಟಾಗಿರುವುದನ್ನು ಸೂಚಿಸಬಹುದು. ಬಿಳಿ ಸ್ರಾವದ ಕಾರಣಗಳನ್ನು ಅರಿಯುವುದು, ಇದು ಯಾವ ಸಂದರ್ಭದಲ್ಲಿ ಸಾಮಾನ್ಯ ಎಂದು ತಿಳಿಯುವುದು ಮತ್ತು ಯಾವಾಗ ವೈದ್ಯಕೀಯ ಸಲಹೆ ಪಡೆಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ನಿಮ್ಮ ಸಂತಾನೋತ್ಪತ್ತಿ ಆರೋಗ್ಯವನ್ನು ನಿರ್ವಹಿಸಲು ಬಹಳ ಮುಖ್ಯವಾಗಿದೆ.

ಬಿಳಿ ಸ್ರಾವ ಅಥವಾ ವೈಟ್ ಡಿಸ್ ಚಾರ್ಜ್ ಎಂದರೇನು?

ವೈದ್ಯಕೀಯವಾಗಿ ಲ್ಯೂಕೋರಿಯಾ ಎಂದು ಕರೆಯಲ್ಪಡುವ ಬಿಳಿ ಸ್ರಾವವು, ಯೋನಿ ಮತ್ತು ಗರ್ಭಾಶಯದ ಗುತ್ತಿಯಿಂದ ಬಿಡುಗಡೆಯಾಗುವ ಕೋಶಗಳು ಮತ್ತು ಸ್ರಾವಗಳಿಂದ ಕೂಡಿದ ಬಿಳಿಯ ದ್ರವವಾಗಿದೆ. ಇದರ ಉದ್ದೇಶವು ಯೋನಿಯ ಅಂಗಾಂಶಗಳನ್ನು ಆರೋಗ್ಯಕರವಾಗಿರಿಸುವುದು, ತೇವಾಂಶವನ್ನು ಕಾಪಾಡುವುದು ಮತ್ತು ಸೋಂಕುಗಳ ವಿರುದ್ಧ ರಕ್ಷಣೆ ನೀಡುವುದಾಗಿದೆ. ಸ್ರಾವದ ಪ್ರಮಾಣ, ಸ್ಥಿರತೆ ಮತ್ತು ಬಣ್ಣವು ಋತುಚಕ್ರದ ಉದ್ದಕ್ಕೂ ಆಗುವ ಹಾರ್ಮೋನ್ ಬದಲಾವಣೆಗಳಿಂದ ಸಹಜವಾಗಿ ಏರುಪೇರಾಗುತ್ತದೆ.

ಸಾಮಾನ್ಯ ಬಿಳಿ ಸ್ರಾವವು ಬಹುತೇಕ ಹೀಗಿರುತ್ತದೆ:

  • ದಪ್ಪ, ಕೆನೆಯಂತಹ ಅಥವಾ ಜಿಗುಟಾಗಿ ಇರುತ್ತದೆ
  • ಬಿಳಿ ಅಥವಾ ಸ್ವಲ್ಪ ಹಳದಿಯ ಬಣ್ಣದಲ್ಲಿರುತ್ತದೆ
  • ಸೌಮ್ಯವಾದ ವಾಸನೆಯನ್ನು ಹೊಂದಿರುತ್ತದೆ ಅಥವಾ ವಾಸನೆ ಇರುವುದಿಲ್ಲ
  • ಕಿರಿಕಿರಿಯುಂಟುಮಾಡುವುದಿಲ್ಲ ಮತ್ತು ನೋವುರಹಿತವಾಗಿರುತ್ತದೆ

ಋತುಸ್ರಾವದ ಮೊದಲು ಬಿಳಿ ಸ್ರಾವ ಉಂಟಾಗಲು ಕಾರಣಗಳೇನು?

ಋತುಸ್ರಾವದ ಮೊದಲು ಕೆನೆಯಂತಹ ಬಿಳಿ ಸ್ರಾವ ಆಗುವುದು ಸಾಮಾನ್ಯವಾಗಿ ಸಹಜವಾದದ್ದು ಮತ್ತು ಇದು ಹಾರ್ಮೋನ್ ಬದಲಾವಣೆಗಳಿಗೆ ಸಂಬಂಧಿಸಿದ್ದಾಗಿದೆ. ಆದರೆ, ಇದು ಇತರ ಕೆಲವು ಸ್ಥಿತಿಗಳ ಸಂಕೇತವೂ ಆಗಿರಬಹುದು. ಬಿಳಿ ಸ್ರಾವ ಉಂಟಾಗಲು ಸಾಮಾನ್ಯ ಕಾರಣಗಳು ಹೀಗಿವೆ:

·         ಹಾರ್ಮೋನ್ ಬದಲಾವಣೆಗಳು: ಅಂಡೋತ್ಪತ್ತಿಯ ನಂತರ, ಪ್ರೊಜೆಸ್ಟರಾನ್ ಮಟ್ಟಗಳ ಏರಿಕೆಯಿಂದ ದಪ್ಪ, ಬಿಳಿ ಅಥವಾ ಮೋಡದ ಬಣ್ಣದಂತಹ ಸರ್ವಿಕಲ್ ಮ್ಯೂಕಸ್ ಉಂಟಾಗುತ್ತದೆ. ಇದು ಅತ್ಯಂತ ಸಾಮಾನ್ಯ ಮತ್ತು ಸಹಜ ಕಾರಣವಾಗಿದೆ.

·         ಗರ್ಭಾವಸ್ಥೆ: ಸ್ರಾವವು ಹೆಚ್ಚಿದ್ದರೆ ಅದು ಗರ್ಭಾಶಯದ ಒಳಪದರವನ್ನು ಬೆಂಬಲಿಸುವ ಹಾರ್ಮೋನ್ ಬದಲಾವಣೆಗಳಿಂದ ನಡೆಯಬಹುದಾಗಿದ್ದು, ಗರ್ಭಾವಸ್ಥೆಯ ಆರಂಭಿಕ ಸಂಕೇತವಾಗಿರಬಹುದು.

·         ಗರ್ಭನಿರೋಧಕ ಮಾತ್ರೆಗಳು ಅಥವಾ ಹಾರ್ಮೋನ್ ಗರ್ಭನಿರೋಧಕಗಳು: ಇವು ಹಾರ್ಮೋನ್ ಮಟ್ಟಗಳನ್ನು ಬದಲಾಯಿಸಬಹುದು, ಇದರಿಂದ ಯೋನಿಯ ಸ್ರಾವ ಹೆಚ್ಚಾಗಬಹುದು ಅಥವಾ ದಪ್ಪವಾಗಬಹುದು.

·         ಯೀಸ್ಟ್ ಇನ್ ಫೆಕ್ಷನ್: ಕ್ಯಾಂಡಿಡಾ ಶಿಲೀಂಧ್ರದ ಅತಿಯಾದ ಬೆಳವಣಿಗೆಯಿಂದ ದಪ್ಪ, ಬಿಳಿ ಮತ್ತು ಗಟ್ಟಿಯಾದ ಸ್ರಾವ ಉಂಟಾಗಬಹುದು. ಇದರ ಜೊತೆಗೆ ತುರಿಕೆ ಮತ್ತು ಕಿರಿಕಿರಿಯುಂಟಾಗಬಹುದು.

·         ಬ್ಯಾಕ್ಟೀರಿಯಲ್ ವ್ಯಾಜಿನೋಸಿಸ್: ಯೋನಿಯ ಬ್ಯಾಕ್ಟೀರಿಯಾಗಳ ಸಮತೋಲನದ ಕಾಯಿಲೆಯಿಂದ ತೆಳುವಾದ ಬಿಳಿ ಅಥವಾ ಬೂದು ಬಣ್ಣದ ಸ್ರಾವವು ಮೀನಿನಂತಹ ವಾಸನೆಯೊಂದಿಗೆ ಕಾಣಿಸಬಹುದು.

·         ಲೈಂಗಿಕವಾಗಿ ಹರಡುವ ಸೋಂಕುಗಳು (ಎಸ್ ಟಿ ): ಕ್ಲಮೈಡಿಯಾ ಅಥವಾ ಗೊನೋರಿಯಾದಂತಹ ಕೆಲವು ಎಸ್ ಟಿ ಐಗಳು ಅಸಾಮಾನ್ಯ ಬಿಳಿ ಸ್ರಾವವನ್ನು ಉಂಟುಮಾಡಬಹುದು. ಇದರೊಂದಿಗೆ ನೋವು ಅಥವಾ ವಾಸನೆಯಂತಹ ಇತರ ಲಕ್ಷಣಗಳು ಕಾಣಿಸಬಹುದು.

·         ಒತ್ತಡ ಅಥವಾ ಜೀವನಶೈಲಿ ಬದಲಾವಣೆಗಳು: ಇವು ತಾತ್ಕಾಲಿಕವಾಗಿ ಹಾರ್ಮೋನ್ ಮಟ್ಟಗಳ ಮೇಲೆ ಪರಿಣಾಮ ಬೀರಬಹುದು, ಇದರಿಂದ ಯೋನಿಯ ಸ್ರಾವದಲ್ಲಿ ಬದಲಾವಣೆಗಳು ಉಂಟಾಗಬಹುದು.

ಬಿಳಿ ಸ್ರಾವದ ಜೊತೆಗೆ ತುರಿಕೆ, ವಾಸನೆ ಅಥವಾ ಅಸ್ವಸ್ಥತೆ ಇದ್ದರೆ, ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಆರೋಗ್ಯ ಸೇವಾ ಪೂರೈಕೆದಾರರನ್ನು ಸಂಪರ್ಕಿಸುವುದು ಉತ್ತಮ.

ಋತುಸ್ರಾವದ ಮೊದಲು ಬಿಳಿ ಸ್ರಾವ ಸಾಮಾನ್ಯವೇ?

ಹೌದು, ಋತುಸ್ರಾವದ ಮೊದಲು ಬಿಳಿ ಸ್ರಾವವು ಸಾಮಾನ್ಯವಾಗಿ ಸಹಜವಾದದ್ದು ಮತ್ತು ದೇಹದ ಸಹಜ ಋತುಚಕ್ರದ ಭಾಗವಾಗಿದೆ. ಈ ರೀತಿಯ ಸ್ರಾವವು ಸಾಮಾನ್ಯವಾಗಿ ಕೆನೆಯಂತಹ ಬಿಳಿಯ ಬಣ್ಣದಲ್ಲಿರುತ್ತದೆ, ತೆಳು ಅಥವಾ ಮಧ್ಯಮ ದಪ್ಪದ ಸ್ರಾವ ಇದಾಗಿದೆ. ವಾಸನೆ ಇಲ್ಲದಿರಬಹುದು ಅಥವಾ ಸೌಮ್ಯವಾದ, ಆಕ್ಷೇಪಣೀಯವಲ್ಲದ ವಾಸನೆಯನ್ನು ಹೊಂದಿರಬಹುದಾಗಿದೆ. ಇದು ಸಾಮಾನ್ಯವಾಗಿ ಹಾರ್ಮೋನ್ ಬದಲಾವಣೆಯಿಂದ ಅದರಲ್ಲೂ ಅಂಡೋತ್ಪತ್ತಿಯ ನಂತರ ಪ್ರೊಜೆಸ್ಟರಾನ್ ಹೆಚ್ಚಳದಿಂದ ಉಂಟಾಗುತ್ತದೆ.

ಸಂಶೋಧನೆಯ ಪ್ರಕಾರ, ಸುಮಾರು ಶೇ.55ರಷ್ಟು ಮಹಿಳೆಯರು ಋತುಸ್ರಾವದ ಮೊದಲ ದಿನಗಳಲ್ಲಿ ಯೋನಿಯ ಸ್ರಾವದ ಹೆಚ್ಚಳವನ್ನು ಅನುಭವಿಸುತ್ತಾರೆ. ಈ ಸ್ರಾವವು ಯೋನಿಯನ್ನು ಸ್ವಚ್ಛವಾಗಿಡಲು ಮತ್ತು ಆರೋಗ್ಯಕರ ಪಿಎಚ್ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ. ಬಿಳಿ ಸ್ರಾವದ ಅತ್ಯಂತ ಸಾಮಾನ್ಯ ಕಾರಣವೆಂದರೆ ಈ ಹಾರ್ಮೋನ್ ಏರಿಳಿತ, ಇದು ಗರ್ಭಾಶಯದ ಸರ್ವೀಕಲ್ ಮ್ಯೂಕಸ್ ಅನ್ನು ದಪ್ಪವಾಗಿಸುತ್ತದೆ. ಸ್ರಾವದ ಜೊತೆಗೆ ತುರಿಕೆ, ತೀವ್ರವಾದ ವಾಸನೆ ಅಥವಾ ಬಣ್ಣದ ಬದಲಾವಣೆ ಇಲ್ಲದಿದ್ದರೆ ಇದು ಸಾಮಾನ್ಯವಾಗಿ ಚಿಂತೆಯ ವಿಷಯವಲ್ಲ. ಆದರೆ, ಯಾವುದೇ ಅಸಾಮಾನ್ಯ ಲಕ್ಷಣಗಳು ಕಂಡುಬಂದರೆ ಸೋಂಕುಗಳನ್ನು ಪತ್ತೆ ಹಚ್ಚಲು ತಕ್ಷಣ ವೈದ್ಯರಿಂದ ಅಥವಾ ಆರೋಗ್ಯ ಸೇವಾ ಪೂರೈಕೆದಾರರಿಂದ ಮೌಲ್ಯಮಾಪನ ಮಾಡಿಸಿಕೊಳ್ಳಬೇಕು.

ನಿಮ್ಮ ಋತುಚಕ್ರದ ಉದ್ದಕ್ಕೂ ಯಾವ ರೀತಿಯ ಸ್ರಾವವನ್ನು ನಿರೀಕ್ಷಿಸಬಹುದು?

ನಿಮ್ಮ ಋತುಚಕ್ರದ ಉದ್ದಕ್ಕೂ, ಹಾರ್ಮೋನ್ ಏರಿಳಿತಗಳಿಂದ ಯೋನಿಯ ಸ್ರಾವದಲ್ಲಿ ಬದಲಾವಣೆಗಳು ಉಂಟಾಗುತ್ತಿರುತ್ತವೆ. ಈ ಸಮಯದಲ್ಲಿ ನೀವು ಏನನ್ನು ನಿರೀಕ್ಷಿಸಬಹುದು ಎಂಬ ವಿವರ ಈ ಕೆಳಗಿದೆ:

·         ಋತುಸ್ರಾವದ ಸಮಯದಲ್ಲಿ: ಸಾಮಾನ್ಯವಾಗಿ ಸ್ರಾವವು ಇರುವುದಿಲ್ಲ ಅಥವಾ ರಕ್ತದೊಂದಿಗೆ ಬೆರೆತಿರುತ್ತದೆ

·         ಋತುಸ್ರಾವದ ನಂತರ ತಕ್ಷಣ: ಕಡಿಮೆ ಅಥವಾ ಸ್ರಾವವಿರುವುದಿಲ್ಲ; ಕೆಲವು ಮಹಿಳೆಯರು ಡ್ರೈ ಫೀಲಿಂಗ್ ಅನುಭವಿಸಬಹುದು

·         ಅಂಡೋತ್ಪತ್ತಿಯ ಮುನ್ನ: ಈಸ್ಟ್ರೊಜೆನ್ ಮಟ್ಟಗಳ ಏರಿಕೆಯಿಂದ ಸ್ರಾವವು ಜಿಗುಟಾದ, ಬಿಳಿ ಅಥವಾ ಮೋಡದಂತಹ ಬಣ್ಣದಿಂದ ಕೂಡಿರುತ್ತದೆ

·         ಅಂಡೋತ್ಪತ್ತಿಯ ಸಮಯದಲ್ಲಿ: ಸ್ಪಷ್ಟ, ಜಿಗುಟಾದ, ಜಾರುವ ಸ್ರಾವ (ಆಗಾಗ್ಗೆ ಮೊಟ್ಟೆಯ ಬಿಳಿಭಾಗದಂತಹ ಸ್ರಾವ)

·         ಅಂಡೋತ್ಪತ್ತಿಯ ನಂತರ: ಕಡಿಮೆ ಸ್ರಾವ, ಮತ್ತೆ ಮೋಡದಂತಹ ಅಥವಾ ಬಿಳಿಯಾಗಿ ಕಾಣಬಹುದಾದ ಸ್ರಾವ

ಈ ಬಿಳಿ ಸ್ರಾವದ ವ್ಯತ್ಯಾಸಗಳು ಹಾರ್ಮೋನ್ ಮಟ್ಟಗಳು ಏರಿಳಿಯುವಾಗ ನಡೆಯುವ ನಿಮ್ಮ ಋತುಚಕ್ರದ ಸಹಜ ಭಾಗವಾಗಿವೆ.

ಋತುಸ್ರಾವದ ಮೊದಲು ಉಂಟಾಗುವ ಬಿಳಿ ಸ್ರಾವಕ್ಕೆ ಕಾರಣಗಳು

ಋತುಸ್ರಾವದ ಮೊದಲು ಬಿಳಿ ಸ್ರಾವವು ಉಂಟಾಗುವುದು ಸಾಮಾನ್ಯವಾಗಿ ಸಹಜವಾದದ್ದು ಮತ್ತು ವಿಶೇಷವಾಗಿ ಈಸ್ಟ್ರೊಜೆನ್ ಮಟ್ಟಗಳ ಏರಿಕೆಗೆ ಸಂಬಂಧಿಸಿದ್ದು. ಈಸ್ಟ್ರೊಜೆನ್ ಹೆಚ್ಚಾದಂತೆ, ಸರ್ವಿಕ್ಸ್ ಹೆಚ್ಚಿನ ಮ್ಯೂಕಸ್ ಅನ್ನು ಉತ್ಪಾದಿಸುತ್ತದೆ. ಇದು ಬಿಳಿ ಅಥವಾ ಮೋಡದಂತಹ ಬಣ್ಣದಂತೆ ಕಾಣಬಹುದು. ಋತುಸ್ರಾವದ ಮೊದಲು ಈ ಹಾಲಿನ ಬಣ್ಣದ ಬಿಳಿ ಸ್ರಾವವು ಬ್ಯಾಕ್ಟೀರಿಯಾ ಮತ್ತು ವಿದೇಶೀ ಕಣಗಳನ್ನು ಹೊರಹಾಕುವ ಮೂಲಕ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ರಕ್ಷಿಸುವ ದೇಹದ ಸಹಜ ವಿಧಾನವಾಗಿದೆ.

ಆದರೆ, ನಿಮ್ಮ ಬಿಳಿ ಸ್ರಾವದ ಜೊತೆಗೆ ತುರಿಕೆ, ಉರಿಯೂತ ಅಥವಾ ತೀವ್ರವಾದ ವಾಸನೆ ಇದ್ದರೆ, ಇದು ಸೋಂಕಿನ ಸಂಕೇತವಾಗಿರಬಹುದು. ಅಸಾಮಾನ್ಯ ಬಿಳಿ ಸ್ರಾವ ಉಂಟಾಗಲು ಸಾಮಾನ್ಯ ಕಾರಣಗಳು ಈ ಕೆಳಗಿನಂತಿವೆ:

1.    ಯೀಸ್ಟ್ ಸೋಂಕುಗಳು: ಶಿಲೀಂಧ್ರದ ಅತಿಯಾದ ಬೆಳವಣಿಗೆಯಿಂದ ದಪ್ಪ, ಬಿಳಿ, ಕಾಟೇಜ್ ಚೀಸ್‌ ನಂತಹ ಸ್ರಾವ ಉಂಟಾಗುತ್ತದೆ

2.    ಬ್ಯಾಕ್ಟೀರಿಯಲ್ ವ್ಯಾಜಿನೋಸಿಸ್: ಯೋನಿಯ ಬ್ಯಾಕ್ಟೀರಿಯಾಗಳ ಸಮತೋಲನದ ಕಾಯಿಲೆಯಿಂದ ಮೀನಿನಂತಹ ವಾಸನೆಯುಳ್ಳ ತೆಳುವಾದ, ಬೂದು- ಬಿಳಿಯ ಸ್ರಾವವು ಉಂಟಾಗುತ್ತದೆ

3.    ಲೈಂಗಿಕವಾಗಿ ಹರಡುವ ಸೋಂಕುಗಳು (ಎಸ್ ಟಿ ): ಕ್ಲಮೈಡಿಯಾ ಅಥವಾ ಗೊನೊರಿಯಾದಂತಹ ಕೆಲವು ಎಸ್ ಟಿ ಐಗಳು ಅಸಾಮಾನ್ಯ ಸ್ರಾವವನ್ನು ಉಂಟುಮಾಡಬಹುದು

ನಿಮ್ಮ ಬಿಳಿ ಸ್ರಾವದ ಕಾರಣಕ್ಕೆ ಸೋಂಕು ಕಾರಣ ಎಂಬ ಅನುಮಾನ ನಿಮಗಿದ್ದರೆ ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಆರೋಗ್ಯ ಸೇವಾ ಪೂರೈಕೆದಾರರನ್ನು ಸಂಪರ್ಕಿಸುವುದು ಮುಖ್ಯ.

ಚಿಂತಿಸಬೇಕಾದ ಸಂದರ್ಭ ಯಾವುದು?

ಋತುಸ್ರಾವದ ಮೊದಲಿನ ಬಿಳಿ ಸ್ರಾವವು ಸಾಮಾನ್ಯವಾಗಿ ಸಹಜವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವು ಲಕ್ಷಣಗಳು ಸಮಸ್ಯೆ ಇರುವುದನ್ನು ಸೂಚಿಸಬಹುದು, ಆ ಲಕ್ಷಣಗಳು ಕಂಡು ಬಂದರೆ ಅದಕ್ಕೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ.

·         ಸ್ರಾವದ ಜೊತೆಗೆ ತುರಿಕೆ, ಕಿರಿಕಿರಿ ಅಥವಾ ತೀವ್ರವಾದ, ಅಹಿತಕರ ವಾಸನೆ ಇದ್ದರೆ, ಇದು ಯೋನಿಯ ಇನ್ ಫೆಕ್ಷನ್ ಉಂಟಾಗಿರುವ ಸೂಚನೆಯಾಗಿರಬಹುದು.

·         ಕಾಟೇಜ್ ಚೀಸ್‌ನಂತಿರುವ ದಪ್ಪ, ಗಟ್ಟಿಯಾದ ಸ್ರಾವವು ಯೀಸ್ಟ್ ಸೋಂಕಿನ ಸಾಮಾನ್ಯ ಲಕ್ಷಣವಾಗಿದೆ, ಇದು ಬಹಳಷ್ಟು ಅಸ್ವಸ್ಥತೆಯನ್ನು ಉಂಟುಮಾಡಬಹುದು.

·         ಇದರ ಜೊತೆಗೆ, ಸ್ರಾವವು ಮುಂದುವರಿಯುತ್ತಿದ್ದರೆ, ಹಳದಿ ಅಥವಾ ಹಸಿರು ಬಣ್ಣಕ್ಕೆ ಬದಲಾಗಿದ್ದರೆ, ಅಥವಾ ಪೆಲ್ವಿಕ್ ನೋವಿನೊಂದಿಗೆ ಕಾಣಿಸಿದರೆ, ಇದು ಬ್ಯಾಕ್ಟೀರಿಯಲ್ ವ್ಯಾಜಿನೋಸಿಸ್, ಲೈಂಗಿಕವಾಗಿ ಸಂಕ್ರಮಿಸುವ ಸೋಂಕು ಅಥವಾ ಚಿಕಿತ್ಸೆಯ ಅಗತ್ಯವಿರುವ ಇತರ ಸಮಸ್ಯೆ ಸಂಕೇತವಾಗಿರಬಹುದು.

·         ಕೆಲವು ಮಹಿಳೆಯರು ಬಿಳಿ ಸ್ರಾವ ಅನುಭವಿಸಬಹುದು. ಆದರೆ ಋತುಸ್ರಾವ ಆಗದಿರಬಹುದು, ಇದು ಆರಂಭಿಕ ಗರ್ಭಾವಸ್ಥೆ ಅಥವಾ ಹಾರ್ಮೋನ್ ಅಸಮತೋಲನಕ್ಕೆ ಸಂಬಂಧಿಸಿರಬಹುದು.

ನೀವು ಸ್ರಾವದೊಂದಿಗೆ ಅಸಾಮಾನ್ಯ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ ಅಥವಾ ಕಾರಣ ಗೊತ್ತಾಗದೇ ಇದ್ದರೆ, ಆರೋಗ್ಯ ಸೇವಾ ಪೂರೈಕೆದಾರರನ್ನು ಸಂಪರ್ಕಿಸುವುದು ಮುಖ್ಯ. ಸಕಾಲಿಕ ರೋಗನಿರ್ಣಯ ಮತ್ತು ಚಿಕಿತ್ಸೆಯು ತೊಡಕುಗಳನ್ನು ತಡೆಯಲು ಮತ್ತು ಸರಿಯಾದ ಸಂತಾನೋತ್ಪತ್ತಿ ಆರೋಗ್ಯವನ್ನು ಪಾಲಿಸಲು ಸಹಾಯ ಮಾಡುತ್ತದೆ. ನಿಮ್ಮ ಸಹಜಾನುಭವವನ್ನು ನಂಬುವುದು ಮತ್ತು ಏನಾದರೂ ತಪ್ಪಾಗಿದೆ ಎಂದು ಭಾಸವಾದಾಗ ಸಹಾಯವನ್ನು ಕೋರಿಕೊಳ್ಳುವುದು ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಲು ಅತ್ಯಗತ್ಯವಾಗಿದೆ. ಸಂಕ್ಷಿಪ್ತವಾಗಿ, ಸಾಂದರ್ಭಿಕ ಬಿಳಿ ಸ್ರಾವವು ಆರೋಗ್ಯಕರ ಋತುಚಕ್ರದ ಭಾಗವಾಗಿದೆ. ಆದರೆ ಅದರ ನೋಟ, ವಾಸನೆ ಅಸಹಜವಾಗಿದ್ದರೆ ಅಥವಾ ಇತರ ಲಕ್ಷಣಗಳು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಬಾರದು.

ಮನೆ ಪರಿಹಾರಗಳು ಮತ್ತು ನಿರ್ವಹಣೆ

ಋತುಸ್ರಾವದ ಮೊದಲು ಉಂಟಾಗುವ ಸಾಮಾನ್ಯ ಬಿಳಿ ಸ್ರಾವಕ್ಕೆ, ಉತ್ತಮ ಸ್ವಚ್ಛತೆಯನ್ನು ಪಾಲನೆ ಮಾಡುವುದು ಯೋನಿಯ ಆರೋಗ್ಯವನ್ನು ಕಾಪಾಡಲು ಮತ್ತು ಕಿರಿಕಿರಿ ಅಥವಾ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಇತರ ಕೆಲವು ಪರಿಣಾಮಕಾರಿ ಸಲಹೆಗಳು ಹೀಗಿವೆ:

·         ತೇವಾಂಶ ಸಂಗ್ರಹವನ್ನು ಕಡಿಮೆ ಮಾಡಲು ಮತ್ತು ಗಾಳಿಯ ಹರಿವನ್ನು ಸರಾಗಗೊಳಿಸಲು ಉಸಿರಾಡುವ ಹತ್ತಿಯ ಒಳ ಉಡುಪುಗಳನ್ನು ಧರಿಸಿ.

·         ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರ ಬೆಳವಣಿಗೆಯನ್ನು ತಡೆಯಲು ಒದ್ದೆಯಾದ ಅಥವಾ ಬೆವರಿನ ಬಟ್ಟೆಗಳನ್ನು ತಕ್ಷಣ ಬದಲಾಯಿಸಿ.

·         ಶೌಚಾಲಯ ಬಳಸಿದ ನಂತರ ಮುಂದಿನಿಂದ ಹಿಂದಕ್ಕೆ ಒರೆಸಿಕೊಳ್ಳಿ, ಇದರಿಂದ ಗುದದಿಂದ ಯೋನಿಗೆ ಬ್ಯಾಕ್ಟೀರಿಯಾ ಹರಡುವುದನ್ನು ತಪ್ಪಿಸಬಹುದು.

·         ಯೋನಿ ಪ್ರದೇಶದಲ್ಲಿ ಡೌಚಿಂಗ್ ಅಥವಾ ಸುಗಂಧಿತ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಿ, ಏಕೆಂದರೆ ಇವು ಸಹಜ ಎಎಚ್ ಸಮತೋಲನವನ್ನು ತೊಂದರೆ ಮಾಡಬಹುದು ಮತ್ತು ಕಿರಿಕಿರಿಯನ್ನು ಉಂಟುಮಾಡಬಹುದು.

ತುರಿಕೆ ಅಥವಾ ಸಣ್ಣಗೆ ಕಿರಿಕಿರಿ ಆಗುವ ಲಕ್ಷಣಗಳನ್ನು ಅನುಭವಿಸಿದರೆ ಓವರ್-ದಿ-ಕೌಂಟರ್ ಆಂಟಿಫಂಗಲ್ ಕ್ರೀಮ್‌ಗಳು, ವೈಪ್‌ ಗಳು ಅಥವಾ ತೆಂಗಿನ ಎಣ್ಣೆಯಂತಹ ಸಹಜ ಪರಿಹಾರಗಳು ತಾತ್ಕಾಲಿಕ ಉಪಶಮನವನ್ನು ನೀಡಬಹುದು. ಆದರೆ, ಲಕ್ಷಣಗಳು ಮುಂದುವರಿದರೆ, ತೀವ್ರವಾದರೆ ಅಥವಾ ಆಗಾಗ್ಗೆ ಮರಳಿದರೆ, ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಆರೋಗ್ಯ ಸೇವಾ ಪೂರೈಕೆದಾರರನ್ನು ಸಂಪರ್ಕಿಸುವುದು ಅತ್ಯಗತ್ಯ. ಸ್ವಯಂ ಆರೈಕೆ ಸಹಾಯ ಮಾಡುತ್ತದೆ, ಆದರೆ ವೈದ್ಯಕೀಯ ಚಿಕಿತ್ಸೆ ದೀರ್ಘಕಾಲಿಕ ಆರೋಗ್ಯವನ್ನು ಒದಗಿಸುತ್ತದೆ.

ವೈದ್ಯಕೀಯ ಚಿಕಿತ್ಸೆಗಳು

ಅಸಾಮಾನ್ಯ ಬಿಳಿ ಸ್ರಾವಕ್ಕೆ ಚಿಕಿತ್ಸೆಯು ಅದರ ಕಾರಣವನ್ನು ಅವಲಂಬಿಸಿರುತ್ತದೆ. ಆರೋಗ್ಯ ಸೇವಾ ಪೂರೈಕೆದಾರರು ಅಥವಾ ವೈದ್ಯರು ಸಾಮಾನ್ಯವಾಗಿ ಪೆಲ್ವಿಕ್ ಪರೀಕ್ಷೆಯೊಂದಿಗೆ ತಪಾಸಣೆ ಆರಂಭಿಸುತ್ತಾರೆ ಮತ್ತು ಸೋಂಕುಗಳು ಅಥವಾ ಹಾರ್ಮೋನ್ ಅಸಮತೋಲನವನ್ನು ಗುರುತಿಸಲು ಸ್ರಾವದ ಮಾದರಿಯನ್ನು ಪ್ರಯೋಗಾಲಯದ ವಿಶ್ಲೇಷಣೆಗೆ ಕಳುಹಿಸಲು ಸೂಚಿಸಬಹುದು. ರೋಗನಿರ್ಣಯದ ಆಧಾರದ ಮೇಲೆ ಈ ಕೆಳಗಿನ ಚಿಕಿತ್ಸೆಗಳನ್ನು ಶಿಫಾರಸು ಮಾಡಬಹುದು:

·         ಯೀಸ್ಟ್ ಸೋಂಕುಗಳಿಗೆ ಆಂಟಿಫಂಗಲ್ ಔಷಧಿಗಳು. ಇವು ಕ್ರೀಮ್‌ಗಳು, ಆಯಿಂಟ್ ಮೆಂಟ್‌ಗಳು, ಮಾತ್ರೆಗಳು ಅಥವಾ ಯೋನಿಯ ಸಪೊಸಿಟರಿಗಳ ರೂಪದಲ್ಲಿ ಇರಬಹುದು.

·         ಬ್ಯಾಕ್ಟೀರಿಯಲ್ ವ್ಯಾಜಿನೋಸಿಸ್ ಅಥವಾ ಕೆಲವು ಲೈಂಗಿಕವಾಗಿ ಹರಡು ಸೋಂಕುಗಳಂತಹ (ಎಸ್ ಟಿಐ) ಬ್ಯಾಕ್ಟೀರಿಯಲ್ ಸೋಂಕುಗಳಿಗೆ ಆಂಟಿಬಯೋಟಿಕ್ಸ್.

·         ಸ್ರಾವದ ರೂಪ ಅಥವಾ ಪ್ರಮಾಣದ ಮೇಲೆ ಪರಿಣಾಮ ಬೀರುವ ಹಾರ್ಮೋನ್ ಅಸಮತೋಲನವನ್ನು ಸರಿಪಡಿಸಲು ಹಾರ್ಮೋನ್ ಚಿಕಿತ್ಸೆಗಳು.

ನಿಗದಿತ ಚಿಕಿತ್ಸೆಯನ್ನು ನಿಖರವಾಗಿ ಅನುಸರಿಸುವುದು ಮುಖ್ಯ ಮತ್ತು ಲಕ್ಷಣಗಳು ಶೀಘ್ರವಾಗಿ ಸುಧಾರಿಸಿದರೂ ಸಹ ಔಷಧಿಯ ಸಂಪೂರ್ಣ ಕೋರ್ಸ್ ಅನ್ನು ಪೂರ್ಣಗೊಳಿಸುವುದು ಮುಖ್ಯ. ಆರಂಭಿಕ ಮತ್ತು ನಿಖರವಾದ ರೋಗನಿರ್ಣಯವು ಪರಿಣಾಮಕಾರಿ ನಿರ್ವಹಣೆಯನ್ನು ಸಾಧ್ಯವಾಗಿಸುತ್ತದೆ, ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಸಂತಾನೋತ್ಪತ್ತಿ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಸ್ವಯಂ-ರೋಗನಿರ್ಣಯ ಮಾಡಿಕೊಳ್ಳುವ ಬದಲು ಅಥವಾ ಮಾರ್ಗದರ್ಶನವಿಲ್ಲದೆ ಓವರ್-ದಿ-ಕೌಂಟರ್ ಚಿಕಿತ್ಸೆಗಳನ್ನು ಬಳಸುವ ಬದಲು ಯಾವಾಗಲೂ ವೈದ್ಯರನ್ನು ಸಂಪರ್ಕಿಸಿ.

ಕೊನೆಯ ಮಾತು

ಋತುಸ್ರಾವದ ಮೊದಲಿನ ಬಿಳಿ ಸ್ರಾವವು ಅನೇಕ ಮಹಿಳೆಯರಿಗೆ ಸಾಮಾನ್ಯ ಅನುಭವವಾಗಿದೆ ಮತ್ತು ಸಾಮಾನ್ಯವಾಗಿ ಚಿಂತೆಗೆ ಕಾರಣವಾಗಿರುವುದಿಲ್ಲ. ಆದರೆ, ನಿಮ್ಮ ಸ್ರಾವದ ಜೊತೆಗೆ ಇತರ ಲಕ್ಷಣಗಳು ಕಾಣಿಸಿದರೆ ಅಥವಾ ಸೋಂಕು ಇರುವ ಅನುಮಾನ ನಿಮಗಿದ್ದರೆ ವೈದ್ಯರನ್ನು ಸಂಪರ್ಕಿಸಲು ಹಿಂಜರಿಯಬೇಡಿ.

ಮೆಟ್ರೋಪೊಲೀಸ್ ಹೆಲ್ತ್‌ ಕೇರ್‌ ನಲ್ಲಿ, ಮಹಿಳೆಯರ ಆರೋಗ್ಯದ ಮಹತ್ವವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಭಾರತದಾದ್ಯಂತ ಅತ್ಯುತ್ತಮ ಲ್ಯಾಬ್‌ ಗಳ ಜಾಲ, ಮನೆಯಿಂದ ಸ್ಯಾಂಪಲ್ ಸಂಗ್ರಹಿಸುವ ಅನುಕೂಲಕರ ಸೌಲಭ್ಯ ಮತ್ತು ಸುಲಭವಾದ ಆನ್‌ಲೈನ್ ವರದಿ ಲಭ್ಯತೆ ಇತ್ಯಾದಿ ಸೌಕರ್ಯಗಳ ಮೂಲಕ ನಿಮಗೆ ಅಗತ್ಯವಿರುವ ಆರೈಕೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಋತುಸ್ರಾವದ ಮೊದಲು ಎಷ್ಟು ದಿನಗಳ ಮೊದಲು ಬಿಳಿ ಸ್ರಾವ ಕಾಣಿಸಿಕೊಳ್ಳುತ್ತದೆ?

ಬಿಳಿ ಸ್ರಾವವು ನಿಮ್ಮ ಋತು ಚಕ್ರದ ಯಾವುದೇ ಹಂತದಲ್ಲಿ ಕಾಣಿಸಬಹುದು. ಆದರೆ ಅಂಡೋತ್ಪತ್ತಿಯ ಮೊದಲಿನ ದಿನಗಳಲ್ಲಿ ಇದು ಹೆಚ್ಚು ಸಾಮಾನ್ಯವಾಗಿರುತ್ತದೆ ಮತ್ತು ಋತುಸ್ರಾವ ಆರಂಭವಾಗುವವರೆಗೆ ಮುಂದುವರಿಯಬಹುದು.

ಬಿಳಿ ಸ್ರಾವವು ಗರ್ಭಾವಸ್ಥೆಯ ಸಂಕೇತವಾಗಿರಬಹುದೇ?

ಋತುಸ್ರಾವದ ಮೊದಲಿನ ಬಿಳಿ ಸ್ರಾವವು ಗರ್ಭಾವಸ್ಥೆಯ ಸಂಕೇತವಲ್ಲ. ಆದರೆ ಆರಂಭಿಕ ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾವಣೆಗಳಿಂದ ಸ್ರಾವ ಹೆಚ್ಚಬಹುದು. ಒಂದು ವೇಳೆ ನೀವು ಬಿಳಿ ಸ್ರಾವವನ್ನು ಮತ್ತು ಋತುಸ್ರಾವ ತಪ್ಪಿದ ಅಥವಾ ವಾಕರಿಕೆಯಂತಹ ಆರಂಭಿಕ ಗರ್ಭಾವಸ್ಥೆಯ ಲಕ್ಷಣಗಳನ್ನು ಗಮನಿಸಿದರೆ, ಗರ್ಭಾವಸ್ಥೆಯನ್ನು ದೃಢೀಕರಿಸಲು ಗರ್ಭಾವಸ್ಥೆ ಪರೀಕ್ಷೆಯನ್ನು ತೆಗೆದುಕೊಳ್ಳಿ.

ಋತುಸ್ರಾವದ ಮೊದಲು ದಪ್ಪ ಬಿಳಿ ಸ್ರಾವ ಉಂಟಾದರೆ ಅದರ ಅರ್ಥವೇನು?

ಋತುಸ್ರಾವದ ಮೊದಲು ದಪ್ಪ ಬಿಳಿ ಸ್ರಾವವು ಸಾಮಾನ್ಯವಾಗಿ ಈಸ್ಟ್ರೊಜೆನ್ ಮಟ್ಟಗಳ ಏರಿಕೆಯಿಂದ ಉಂಟಾಗುವ ಹಾರ್ಮೋನ್ ಬದಲಾವಣೆಗಳಿಂದ ಆಗುತ್ತದೆ ಮತ್ತು ಸಹಜವಾಗಿದೆ. ಆದರೆ, ಬಹಳ ದಪ್ಪ, ಗಟ್ಟಿಯಾದ ಸ್ರಾವವು ಯೀಸ್ಟ್ ಸೋಂಕಿನ ಸಂಕೇತವಾಗಿರಬಹುದು.

ನನಗೆ ಬಿಳಿ ಸ್ರಾವವಿದೆ, ಆದರೆ ಋತುಸ್ರಾವವಿಲ್ಲ ಯಾಕೆ?

ಋತುಸ್ರಾವ ಇಲ್ಲದೆ ಬಿಳಿ ಸ್ರಾವವು ಹಾರ್ಮೋನ್ ಅಸಮತೋಲನ, ಒತ್ತಡ ಅಥವಾ ನಿಮ್ಮ ಋತುಚಕ್ರವನ್ನು ಪರಿಣಾಮ ಬೀರುವ ಇತರ ಅಂಶಗಳಿಂದ ಉಂಟಾಗಬಹುದು. ಮೌಲ್ಯಮಾಪನಕ್ಕಾಗಿ ವೈದ್ಯರನ್ನು ಸಂಪರ್ಕಿಸಿ.

ಬಿಳಿ ಸ್ರಾವ ಯಾವಾಗ ನಿಲ್ಲುತ್ತದೆ?

ಬಿಳಿ ಸ್ರಾವವು ಸಾಮಾನ್ಯವಾಗಿ ಅಂಡೋತ್ಪತ್ತಿಯ ನಂತರ ಕಡಿಮೆಯಾಗುತ್ತದೆ. ಆದರೆ ನಿಮ್ಮ ಮುಂದಿನ ಋತುಸ್ರಾವ ಆರಂಭವಾಗುವವರೆಗೆ ಮುಂದುವರಿಯಬಹುದು. ಪ್ರತಿಯೊಬ್ಬ ಮಹಿಳೆಯ ಚಕ್ರವು ವಿಶಿಷ್ಟವಾಗಿರುತ್ತದೆ.

ಬಿಳಿ ಸ್ರಾವವನ್ನು ಗುಣಪಡಿಸುವ ಮಾರ್ಗಗಳೇನು?

ಅಸಾಮಾನ್ಯ ಬಿಳಿ ಸ್ರಾವ ಸಮಸ್ಯೆಗೆ ಚಿಕಿತ್ಸೆಯು ಅದರ ಕಾರಣವನ್ನು ಅವಲಂಬಿಸಿರುತ್ತದೆ. ಯೀಸ್ಟ್ ಸೋಂಕುಗಳಿಗೆ ಆಂಟಿಫಂಗಲ್ ಔಷಧಿಗಳು ಅಗತ್ಯವಿರಬಹುದು. ಆದರೆ ಬ್ಯಾಕ್ಟೀರಿಯಲ್ ಸೋಂಕುಗಳಿಗೆ ಆಂಟಿಬಯೋಟಿಕ್ಸ್ ಬೇಕಾಗುತ್ತದೆ. ನಿಮ್ಮ ವೈದ್ಯರು ಸೂಕ್ತವಾದ ಚಿಕಿತ್ಸೆಯನ್ನು ಶಿಫಾರಸು ಮಾಡಬಹುದು.

ನನ್ನ ಋತುಸ್ರಾವದ ಮೊದಲು ಎಷ್ಟು ದಿನಗಳ ಮೊದಲು ಬಿಳಿ ಸ್ರಾವ ಆರಂಭವಾಗುತ್ತದೆ?

ಬಿಳಿ ಸ್ರಾವವು ಯಾವುದೇ ಸಮಯದಲ್ಲಿ ಆರಂಭವಾಗಬಹುದು. ಸಾಮಾನ್ಯವಾಗಿ 28-ದಿನದ ಚಕ್ರದ ಮಧ್ಯಭಾಗದಲ್ಲಿ, ಅಂದರೆ ಅಂಡೋತ್ಪತ್ತಿಯ ಮೊದಲ ದಿನಗಳಲ್ಲಿ ಇದು ಸಾಮಾನ್ಯವಾಗಿರುತ್ತದೆ.

ಬಿಳಿ ಸ್ರಾವಕ್ಕೆ ಕಾರಣವೇನು?

ಬಿಳಿ ಸ್ರಾವದ ಮುಖ್ಯ ಕಾರಣವೆಂದರೆ ಈಸ್ಟ್ರೊಜೆನ್ ಏರಿಕೆಯಿಂದ ಉಂಟಾಗುವ ಹಾರ್ಮೋನ್ ಬದಲಾವಣೆಗಳು, ಇದು ಸರ್ವಿಕ್ಸ್ ಮ್ಯೂಕಸ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಅಸಾಮಾನ್ಯ ಸ್ರಾವವನ್ನು ಹೇಗೆ ತಡೆಯಬಹುದು?

ಉತ್ತಮ ಸ್ವಚ್ಛತೆಯನ್ನು ಪಾಲಿಸಿ, ಉಸಿರಾಡುವಂತಹ ಬಟ್ಟೆಗಳನ್ನು ಧರಿಸಿ ಮತ್ತು ಒತ್ತಡವನ್ನು ನಿರ್ವಹಿಸಿ. ಇದರಿಂದ ಅಸಾಮಾನ್ಯ ಸ್ರಾವವನ್ನು ತಡೆಯಬಹುದು. ಲಕ್ಷಣಗಳು ಮುಂದುವರಿದರೆ ವೈದ್ಯರನ್ನು ಭೇಟಿಯಾಗಿ.

ಅಂಡೋತ್ಪತ್ತಿಯ ನಂತರ ಬಿಳಿ ಸ್ರಾವ ಆಗುವುದು ಸಹಜವೇ?

ಹೌದು, ಅಂಡೋತ್ಪತ್ತಿಯ ನಂತರ ಬಿಳಿ ಸ್ರಾವ ಆಗುವುದು ಸಹಜವಾಗಿದೆ. ಕೆಲವು ಮಹಿಳೆಯರು ಪ್ರೊಜೆಸ್ಟರಾನ್ ಮಟ್ಟಗಳ ಏರಿಕೆಯಿಂದ ದಪ್ಪ, ಕೆನೆಯಂತಹ ಸ್ರಾವವನ್ನು ಅನುಭವಿಸುತ್ತಾರೆ.

Talk to our health advisor

Book Now

LEAVE A REPLY

Your email address will not be published. Required fields are marked *

Popular Tests

Choose from our frequently booked blood tests

TruHealth Packages

View More

Choose from our wide range of TruHealth Package and Health Checkups

View More