Do you have any queries?

or Call us now at 9982-782-555

basket icon
Basket
(0 items)
back-arrow-image Search Health Packages, Tests & More

Language

ಎರಡು ತಿಂಗಳ ಗರ್ಭಧಾರಣೆಯ ಲಕ್ಷಣಗಳು: ನೀವು ನಿರೀಕ್ಷಿಸಬಹುದಾದ ಕೆಲವು ಸಂಗತಿಗಳು

Last Updated On: Jan 13 2026

ಎರಡು ತಿಂಗಳ ಗರ್ಭಧಾರಣೆ ಅವಧಿ ಅಂದರೆ ಒಂದು ಸಂಭ್ರಮದ ಮತ್ತು ಬದಲಾವಣೆಯ ಸಮಯ. ಯಾಕೆಂದರೆ ಆ ವೇಳೆ ಗರ್ಭಿಣಿಯ ದೇಹವು ಒಳಗೆ ಬೆಳೆಯುತ್ತಿರುವ ಜೀವವನ್ನು ಪೋಷಿಸಲು ಹೊಂದಿಕೊಳ್ಳುತ್ತಾ ಹೋಗುತ್ತದೆ. ಈ ನಿರ್ಣಾಯಕ ಸಮಯದಲ್ಲಿ ಎರಡು ತಿಂಗಳ ಗರ್ಭಧಾರಣೆಯ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು, ನಿಮ್ಮ ಮಗುವಿನ ಬೆಳವಣಿಗೆಯನ್ನು ಗಮನಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯ. ಸುಗಮವಾದ ಮತ್ತು ಆತ್ಮವಿಶ್ವಾಸದಾಯಕ ಗರ್ಭಧಾರಣಾ ಪಯಣಕ್ಕೆ ಇವೆಲ್ಲವೂ ಅತ್ಯಗತ್ಯ.

ಹಾರ್ಮೋನ್ ಬದಲಾವಣೆಗಳು ಜಾಸ್ತಿಯಾದಂತೆ ನೀವು ದೈಹಿಕ ಮತ್ತು ಭಾವನಾತ್ಮಕ ಲಕ್ಷಣಗಳಲ್ಲೂ ಬದಲಾವಣೆ ಆಗುವುದನ್ನು ಗಮನಿಸಬಹುದು. ಬಹಳ ಸಲ ಅದರಿಂದ ನಿಮಗೆ ಆತಂಕ ಅಥವಾ ಗೊಂದಲ ಉಂಟಾಗಬಹುದು. ಆದರೆ ಈ ಲಕ್ಷಣಗಳು ನಿಮ್ಮ ದೇಹದ ಒಳಗೆ ನಡೆಯುತ್ತಿರುವ ಅದ್ಭುತ ಪ್ರಕ್ರಿಯೆಯ ಸಾಮಾನ್ಯ ಭಾಗವಾಗಿದೆ. ಎರಡು ತಿಂಗಳ ಗರ್ಭಧಾರಣೆಯ ಬಗ್ಗೆ ಮಾಹಿತಿ ತಿಳಿದುಕೊಂಡಿರುವುದು ಮತ್ತು ಸೂಕ್ತವಾದ ಗರ್ಭಾವಸ್ಥೆಯ ಆರೈಕೆಯನ್ನು ಪಡೆಯುವುದರಿಂದ ಈ ವಿಶೇಷ ಸಂದರ್ಭವನ್ನು ಆರಾಮದಾಯಕವಾಗಿ ಮತ್ತು ಸಂತೋಷದಿಂದ ಕಳೆಯಬಹುದು.

ಎರಡನೇ ತಿಂಗಳಲ್ಲಿ ಮಗುವಿನ ಬೆಳವಣಿಗೆ

ಎರಡನೇ ತಿಂಗಳಲ್ಲಿ ನಿಮ್ಮ ಮಗು ಗಮನಾರ್ಹವಾದ ಬೆಳವಣಿಗೆ ಮತ್ತು ವಿಕಾಸ ಹೊಂದುತ್ತದೆ. ಕೆಲವು ಪ್ರಮುಖ ವಿಚಾರಗಳು ಈ ಕೆಳಗಿನಂತಿವೆ:

·  ನ್ಯೂರಲ್ ಟ್ಯೂಬ್: ಮೆದುಳು ಮತ್ತು ಬೆನ್ನುಹುರಿಯನ್ನು ರೂಪಿಸುವ ನ್ಯೂರಲ್ ಟ್ಯೂಬ್ ಮುಚ್ಚಿಕೊಳ್ಳುತ್ತದೆ ಮತ್ತು ಬೆಳೆಯುವುದನ್ನು ಮುಂದುವರೆಸುತ್ತದೆ.

·  ಕೈಕಾಲುಗಳ ಮೊಗ್ಗುಗಳು: ಪುಟಾಣಿ ಕೈಕಾಲುಗಳ ಮೊಗ್ಗುಗಳು ಹುಟ್ಟುತ್ತವೆ, ಕ್ರಮೇಣ ಕೈ ಮತ್ತು ಕಾಲುಗಳಾಗಿ ರೂಪುಗೊಳ್ಳುತ್ತವೆ, ಜೊತೆಗೆ ಕೈ ಮತ್ತು ಕಾಲಿನ ಬೆರಳುಗಳಂತಹ ರಚನೆಗಳು ರೂಪುಗೊಳ್ಳುತ್ತವೆ.

·  ಮುಖದ ಲಕ್ಷಣಗಳು: ಕಣ್ಣುಗಳು, ಕಿವಿಗಳು, ಮೂಗು ಮತ್ತು ತುಟಿಗಳಂತಹ ಮುಖದ ಲಕ್ಷಣಗಳು ರೂಪುಗೊಳ್ಳಲು ಆರಂಭವಾಗುತ್ತವೆ, ನಿಮ್ಮ ಮಗುವಿಗೆ ಸ್ಪಷ್ಟವಾದ ನೋಟವನ್ನು ನೀಡುತ್ತವೆ.

·  ಹೃದಯ: ಹೃದಯವು ಕೋಣೆಗಳಾಗಿ ವಿಭಾಗವಾಗುತ್ತದೆ ಮತ್ತು ಲಯಬದ್ಧವಾಗಿ ಬಡಿಯಲು ಆರಂಭಿಸುತ್ತದೆ, ಇದನ್ನು ಸಾಮಾನ್ಯವಾಗಿ ಅಲ್ಟ್ರಾಸೌಂಡ್ ಮೂಲಕ ಕಾಣಬಹುದು.

·  ಪ್ರಮುಖ ಅಂಗಗಳು: ಯಕೃತ್ ಮತ್ತು ಮೂತ್ರಪಿಂಡಗಳಂತಹ ಅಂಗಗಳು ಕಾರ್ಯನಿರ್ವಹಿಸಲು ಆರಂಭಿಸುತ್ತವೆ, ನಿಮ್ಮ ಮಗುವಿನ ದೇಹದ ಕಾರ್ಯಗಳಿಗೆ ಅಡಿಪಾಯವನ್ನು ಹಾಕುತ್ತವೆ.

ಎರಡು ತಿಂಗಳ ಗರ್ಭಧಾರಣೆಯ ಕೊನೆಯಲ್ಲಿ, ನಿಮ್ಮ ಚಿಕ್ಕ ಮಗು ಭ್ರೂಣದಿಂದ ಗರ್ಭದಲ್ಲಿ ಬೆಳೆಯುವ ಮಗುವಾಗಿ (ಫೀಟಸ್) ಪರಿವರ್ತನೆಗೊಳ್ಳುತ್ತದೆ, ಇದರ ಉದ್ದ ಸುಮಾರು 1-2 ಸೆಂಟಿಮೀಟರ್‌ಗಳಿರುತ್ತದೆ.

ಎರಡು ತಿಂಗಳ ಗರ್ಭಿಣಿಯ ಹೊಟ್ಟೆಯ ನೋಟ ಹೇಗಿರುತ್ತದೆ?

ಗರ್ಭಿಣಿಯರ ಸಾಮಾನ್ಯ ಪ್ರಶ್ನೆಯೆಂದರೆ, "ಎರಡು ತಿಂಗಳ ಗರ್ಭಿಣಿಯಾಗಿರುವಾಗ ನನ್ನ ಹೊಟ್ಟೆಯ ಗಾತ್ರ ಹೇಗಿರುತ್ತದೆ?" ಎಂಬುದು. ಇದಕ್ಕೆ ಉತ್ತರ ವಿಶೇಷವಾಗಿ ಆರಂಭಿಕ ಗರ್ಭಾವಸ್ಥೆಯಲ್ಲಿ ಮಹಿಳೆಯಿಂದ ಮಹಿಳೆಗೆ ಬದಲಾಗುತ್ತದೆ.

ಈ ಹಂತದಲ್ಲಿ, ಹೆಚ್ಚಿನ ಮಹಿಳೆಯರಿಗೆ, ವಿಶೇಷವಾಗಿ ಮೊದಲ ಗರ್ಭಧಾರಣೆಯಾದರೆ, ಹೊಟ್ಟೆಯ ಉಬ್ಬು ಎದ್ದು ಕಾಣಿಸುವುದಿಲ್ಲ. ಆದರೆ, ಕೆಲವು ದೈಹಿಕ ಬದಲಾವಣೆಗಳು ಅನುಭವಕ್ಕೆ ಬರಬಹುದು, ಉದಾಹರಣೆಗೆ:

·  ಹಾರ್ಮೋನ್ ಬದಲಾವಣೆಗಳು ಮತ್ತು ರಕ್ತದ ಹರಿವಿನ ಏರಿಕೆಯಿಂದ ಕೆಳಗಿನ ಹೊಟ್ಟೆಯಲ್ಲಿ ಸ್ವಲ್ಪ ಉಬ್ಬರ ಅಥವಾ ತುಂಬಿರುವ ಭಾವನೆ.

·  ಬಟ್ಟೆಗಳು ಸೊಂಟದ ಸುತ್ತ ಸ್ವಲ್ಪ ಒತ್ತಡವನ್ನುಂಟುಮಾಡಬಹುದು, ಹೊಟ್ಟೆಯ ಗಾತ್ರದ ಬೆಳವಣಿಗೆ  ಕಡಿಮೆ ಇರುತ್ತದೆ.

·  ಕೆಲವು ಮಹಿಳೆಯರಿಗೆ, ವಿಶೇಷವಾಗಿ ಈಗಾಗಲೇ ಗರ್ಭಧಾರಣೆಯನ್ನು ಹೊಂದಿದವರಿಗೆ, ಸಣ್ಣ ಉಬ್ಬು ಕಾಣಿಸಬಹುದು.

ಪ್ರತಿಯೊಂದು ಗರ್ಭಧಾರಣೆಯೂ ವಿಶಿಷ್ಟವಾಗಿದೆ ಮತ್ತು ಎರಡು ತಿಂಗಳ ಹೊಟ್ಟೆಯ ನೋಟವು ಒಂದೊಂದು ಸಂದರ್ಭಕ್ಕೆ ತಕ್ಕಂತೆ ಗಣನೀಯವಾಗಿ ಬದಲಾಗಬಹುದು.

ಎರಡು ತಿಂಗಳ ಗರ್ಭಿಣಿಯ ಲಕ್ಷಣಗಳು

ನಿಮ್ಮ ದೇಹವು ಒಳಗಡೆ ನಡೆಯುತ್ತಿರುವ ಅದ್ಭುತ ಬದಲಾವಣೆಗಳಿಗೆ ಹೊಂದಿಕೊಳ್ಳುವಾಗ, ನೀವು ಎರಡು ತಿಂಗಳ ಗರ್ಭಧಾರಣೆಯ ಸಂದರ್ಭದಲ್ಲಿ ವಿವಿಧ ಲಕ್ಷಣಗಳನ್ನು ಅನುಭವಿಸಬಹುದು, ಉದಾಹರಣೆಗೆ:

·  ಬೆಳಗಿನ ವಾಕರಿಕೆ: ವಾಕರಿಕೆ, ಕೆಲವೊಮ್ಮೆ ವಾಂತಿಯೂ ಬರಬಹುದು ಮತ್ತು ದಿನದ ಯಾವುದೇ ಸಮಯದಲ್ಲಿ ಸಂಭವಿಸಬಹುದು.

·  ಸ್ತನದ ನೋವು ಮತ್ತು ಗಾತ್ರದ ಹೆಚ್ಚಳ: ಹಾರ್ಮೋನ್ ಬದಲಾವಣೆಗಳಿಂದ ಸ್ತನಗಳಲ್ಲಿ ನೋವು ಕಾಣಿಸಬಹುದು, ಊದಿಕೊಳ್ಳಬಹುದು ಅಥವಾ ತಿರುಗುವಂತೆ ಅನಿಸಬಹುದು, ಏಕೆಂದರೆ ಅವು ಹಾಲಿನ ಉತ್ಪಾದನೆಗೆ ಸಿದ್ಧವಾಗುತ್ತವೆ.

·  ಪದೇ ಪದೇ ಮೂತ್ರ ವಿಸರ್ಜನೆ: ಮೊದಲ ತ್ರೈಮಾಸಿಕದಲ್ಲಿ, ಆಗಾಗ್ಗೆ ಮೂತ್ರ ವಿಸರ್ಜನೆಯು ಮುಖ್ಯವಾಗಿ ಹಾರ್ಮೋನ್ ಬದಲಾವಣೆಗಳಿಂದ (ಎಚ್ ಸಿ ಜಿ ಮತ್ತು ಪ್ರೊಜೆಸ್ಟರಾನ್‌ ನ ಏರಿಕೆ) ಉಂಟಾಗುತ್ತದೆ, ಗರ್ಭಾಶಯದ ಗಾತ್ರದಿಂದ ಇನ್ನೂ ಅಲ್ಲ.

·  ಆಯಾಸ ಮತ್ತು ನಿದ್ದೆಗೆಡುವಿಕೆ: ಗರ್ಭಧಾರಣೆಯ ಹಲವು ಬದಲಾವಣೆಗಳಿಂದ ವಿಶೇಷವಾಗಿ ಮೊದಲ ತ್ರೈಮಾಸಿಕದಲ್ಲಿ ನೀವು ದಣಿದಿರುವಂತೆ ಅನ್ನಿಸಬಹುದು.

·  ಆಹಾರದ ಆಸೆ ಅಥವಾ ಬೇಡವೆನ್ನಿಸುವುದು: ನಿಮಗೆ ಕೆಲವು ಆಹಾರಗಳ ಬಗ್ಗೆ ತೀವ್ರವಾದ ಆಸೆ ಉಂಟಾಗಬಹುದು ಅಥವಾ ಈ ಹಿಂದೆ ಇಷ್ಟಪಟ್ಟ ಆಹಾರಗಳು ಬೇಡ ಅನ್ನಿಸಬಹುದು.

·  ಮನಸ್ಥಿತಿಯ ಏರಿಳಿತಗಳು ಮತ್ತು ತೀವ್ರ ಭಾವನೆಗಳು: ಹಾರ್ಮೋನ್ ಏರಿಳಿತಗಳಿಂದ ನೀವು ಹೆಚ್ಚು ಭಾವನಾತ್ಮಕವಾಗಿರಬಹುದು, ಮೂಡ್ ಸ್ವಿಂಗ್ ಗಳಿರಬಹುದು ಅಥವಾ ಮನಸ್ಥಿತಿಯಲ್ಲಿ ಏರಿಳಿತಗಳು ಉಂಟಾಗಬಹುದು.

·  ಸೌಮ್ಯವಾದ ಸೆಳೆತ ಅಥವಾ ಅಸ್ವಸ್ಥತೆ: ಗರ್ಭಾಶಯ ವಿಸ್ತರಿಸುವಾಗ ಕೆಲವೊಮ್ಮೆ ಕೆಳಗಿನ ಹೊಟ್ಟೆಯಲ್ಲಿ ಸೆಳೆತ ಅಥವಾ ಎಳೆಯುವಂತಹ ಸಂವೇದನೆ ಸಾಮಾನ್ಯವಾಗಿ ಇರುತ್ತದೆ. ತೀವ್ರವಾದ ನೋವು ಅಥವಾ ರಕ್ತಸ್ರಾವ ಉಂಟಾದರೆ ಅದನ್ನು ನಿರ್ಲಕ್ಷಿಸಬಾರದು ಮತ್ತು ತಕ್ಷಣವೇ ವೈದ್ಯಕೀಯ ಪರೀಕ್ಷೆಯ ಅಗತ್ಯವಿರುತ್ತದೆ.

ಎರಡು ತಿಂಗಳ ಗರ್ಭಧಾರಣೆಯ ಸಮಯದಲ್ಲಿ ಯಾವುದೇ ಲಕ್ಷಣಗಳು ನಿಮಗೆ ಆತಂಕ ಉಂಟುಮಾಡಿದರೆ ಅಥವಾ ಅಸಾಮಾನ್ಯವೆಂದು ತೋರುತ್ತಿದ್ದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಲು ಹಿಂಜರಿಯಬೇಡಿ.

ಎರಡು ತಿಂಗಳ ಗರ್ಭಿಣಿಯ ಅಲ್ಟ್ರಾಸೌಂಡ್: ನೀವು ಏನು ಕಾಣಬಹುದು?

ಎರಡು ತಿಂಗಳ ಗರ್ಭಿಣಿಯಾಗಿರುವಾಗ ಅಲ್ಟ್ರಾಸೌಂಡ್ ಮಾಡಿಸುವುದು ಒಂದು ರೋಮಾಂಚಕ ಅನುಭವ. ಅಲ್ಟ್ರಾ ಸೌಂಡ್ ನಿಮ್ಮ ಮಗುವಿನ ಬೆಳವಣಿಗೆಯ ಒಂದು ಝಲಕ್‌ ಅನ್ನು ನೀಡುತ್ತದೆ. ಅಲ್ಟ್ರಾ ಸೌಂಡ್ ನಲ್ಲಿ ನೀವು ಏನು ಕಾಣಬಹುದು ಎಂಬುದು ಈ ಕೆಳಗಿದೆ:

·  ಗರ್ಭಕೋಶ: ಭ್ರೂಣವನ್ನು ಸುತ್ತುವರೆದಿರುವ ಮತ್ತು ರಕ್ಷಿಸುವ ದ್ರವ ತುಂಬಿದ ರಚನೆ.

·  ಹೊಕ್ಕುಳ ಕೋಶ (ಯೋಕ್ ಸ್ಯಾಕ್): ಗರ್ಭಾಶಯ ಸಂಪೂರ್ಣವಾಗಿ ಬೆಳೆಯುವ ಮೊದಲು ಭ್ರೂಣಕ್ಕೆ ಪೋಷಣೆಯನ್ನು ಒದಗಿಸುವ ಸಣ್ಣ, ವೃತ್ತಾಕಾರದ ರಚನೆ.

·  ಚಿಕ್ಕ ಭ್ರೂಣ: ಸುಮಾರು 1-2 ಸೆಂಟಿಮೀಟರ್‌ ಗಳಷ್ಟು ಉದ್ದವಿರುವ, ನಿಮ್ಮ ಮಗುವಿನ ದೇಹವು ಗೋಚರವಾಗುತ್ತದೆ. ಆದರೆ ವಿವರಗಳನ್ನು ಗುರುತಿಸಲು ಕಷ್ಟವಾಗಬಹುದು.

·  ಹೃದಯದ ಚಟುವಟಿಕೆ: ನೀವು ಸಣ್ಣಗೆ ಕಂಪಿಸುವ ಚಲನೆಯನ್ನು ಕಾಣಬಹುದು, ಇದು ನಿಮ್ಮ ಮಗುವಿನ ಹೃದಯ ಬಡಿತವಾಗಿದೆ. ಇದನ್ನು ಮೊದಲ ಬಾರಿಗೆ ಕೇಳುವುದು ಭಾವನಾತ್ಮಕ ಮತ್ತು ಸಂತೋಷದಾಯಕ ಕ್ಷಣವಾಗಿರುತ್ತದೆ.

·  ಆರಂಭಿಕ ಕೈಕಾಲು ಬೆಳವಣಿಗೆ: ಕೈಕಾಲುಗಳ ಆರಂಭಿಕ ರೂಪಗಳಾದ ಮೊಗ್ಗುಗಳು ಗೋಚರವಾಗಬಹುದು.

·  ತಲೆ ಮತ್ತು ದೇಹದ ಭಾಗ: ನಿಮ್ಮ ಮಗುವಿನ ತಲೆ ಮತ್ತು ದೇಹವು ಹೆಚ್ಚು ಸ್ಪಷ್ಟವಾದ ಆಕಾರವನ್ನು ಪಡೆಯಲು ಆರಂಭಿಸುತ್ತವೆ.

ಎರಡು ತಿಂಗಳ ಅವಳಿ ಗರ್ಭಿಣಿ: ಲಕ್ಷಣಗಳು ಮತ್ತು ವ್ಯತ್ಯಾಸಗಳು

ನೀವು ಅವಳಿ ಮಕ್ಕಳಾಗಬಹುದು ಎಂದು ಯೋಚಿಸುತ್ತಿದ್ದರೆ, ಎರಡು ತಿಂಗಳ ಗರ್ಭಿಣಿಯಾಗಿರುವಾಗಲೇ ಅದರ ಮೊದಲ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಲವು ಲಕ್ಷಣಗಳು ಮತ್ತು ವ್ಯತ್ಯಾಸಗಳು ಹೀಗಿರುತ್ತವೆ:

·  ಹೆಚ್ಚು ಗಮನಾರ್ಹ ಲಕ್ಷಣಗಳು: ಏಕ ಗರ್ಭಧಾರಣೆಗೆ ಹೋಲಿಸಿದರೆ ಹಾರ್ಮೋನ್ ಮಟ್ಟ ಹೆಚ್ಚಿರುತ್ತದೆ, ವಾಕರಿಕೆ, ಆಯಾಸ ಮತ್ತು ಸ್ತನದ ನೋವು ಹೆಚ್ಚು ತೀವ್ರವಾಗಿರಬಹುದು.

·  ಹೆಚ್ಚಿನ ಹೊಟ್ಟೆ ಉಬ್ಬರ: ನಿಮ್ಮ ಗರ್ಭಾವಸ್ಥೆಯ ವಯಸ್ಸಿಗಿಂತ ಹೊಟ್ಟೆಯ ಗಾತ್ರ ಹೆಚ್ಚಿರಬಹುದು ಅಥವಾ ಸ್ವಲ್ಪ ಹೆಚ್ಚು ಹೊಟ್ಟೆ ಅಸ್ವಸ್ಥತೆಯನ್ನು ನೀವು ಅನುಭವಿಸಬಹುದು.

·  ತೂಕ ತ್ವರಿತ ಹೆಚ್ಚಳ: ಅವಳಿಗಳನ್ನು ಹೊಂದಿರುವ ಕೆಲವು ಮಹಿಳೆಯರು ಆರಂಭಿಕ ತಿಂಗಳುಗಳಲ್ಲಿ ತ್ವರಿತವಾಗಿ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

·   ಅಲ್ಟ್ರಾಸೌಂಡ್ ದೃಢೀಕರಣ: ಅಲ್ಟ್ರಾ ಸೌಂಡ್ ನಲ್ಲಿ ಎರಡು ಗರ್ಭಕೋಶಗಳ ಅಥವಾ ಎರಡು ಭ್ರೂಣಗಳ ಉಪಸ್ಥಿತಿಯು ಗೊತ್ತಾಗುತ್ತದೆ. ಪ್ರತ್ಯೇಕ ಹೃದಯ ಬಡಿತವು ಅವಳಿಗಳ ಗರ್ಭಧಾರಣೆಯನ್ನು ದೃಢೀಕರಿಸಬಹುದು.

ನೀವು ಎರಡು ತಿಂಗಳ ಹೊಟ್ಟೆಯ ಗರ್ಭಧಾರಣೆಯ ಕುರಿತು ಅನುಮಾನ ಹೊಂದಿದ್ದರೆ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ.

ಎರಡು ತಿಂಗಳ ಗರ್ಭಿಣಿಗೆ ಸುರಕ್ಷಿತ ವ್ಯಾಯಾಮ ಮತ್ತು ಡಯಟ್ ಸಲಹೆಗಳು

ಎರಡು ತಿಂಗಳ ಗರ್ಭಿಣಿಯಾಗಿರುವಾಗ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದಕ್ಕೆ ಕೆಲವು ಸಲಹೆಗಳು ಇಲ್ಲಿವೆ:

ವ್ಯಾಯಾಮ:

  • ನಡಿಗೆ, ಈಜು ಅಥವಾ ಗರ್ಭಾವಸ್ಥೆಗೆ ಸಂಬಂಧಿಸಿದ ಯೋಗದಂತಹ ಸೌಮ್ಯ ವ್ಯಾಯಾಮಗಳಲ್ಲಿ ತೊಡಗಿಕೊಳ್ಳಿ, ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಕಾಪಾಡುತ್ತದೆ.
  • ತೀವ್ರ ಗತಿಯ ಅಥವಾ ಆಕ್ರಮಣಕಾರಿ ಕ್ರೀಡೆಗಳನ್ನು ಆಡುವುದನ್ನು ತಪ್ಪಿಸಿ, ಇವು ಗಾಯ ಅಥವಾ ಹೊಟ್ಟೆಗೆ ಆಘಾತ ಉಂಟುಮಾಡುವ ಅಪಾಯ ಇರುತ್ತದೆ.
  • ನಿಮ್ಮ ದೇಹದ ಮಾತನ್ನು ಕೇಳಿ ಮತ್ತು ಆಯಾಸವಾದಾಗ ವಿರಾಮ ತೆಗೆದುಕೊಳ್ಳಿ. ಅಗತ್ಯಕ್ಕೆ ತಕ್ಕಂತೆ ನಿಮ್ಮ ದಿನಚರಿಯನ್ನು ಮಾಡಿ.

ಡಯಟ್:

  • ನಿಮ್ಮ ಮಗುವಿನ ಬೆಳವಣಿಗೆಗೆ ನೆರವಾಗುವ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕಡಿಮೆ ಕೊಬ್ಬಿನ ಪ್ರೋಟೀನ್‌ ಗಳು ಮತ್ತು ಕ್ಯಾಲ್ಸಿಯಂ ಭರಿತ ಆಹಾರಗಳಿಂದ ಕೂಡಿದ ಸಮತೋಲಿತ ಆಹಾರವನ್ನು ಸ್ವೀಕರಿಸಿ.
  • ನಿಮ್ಮ ವೈದ್ಯರು ಶಿಫಾರಸು ಮಾಡಿದಂತೆ ಫೋಲಿಕ್ ಆಸಿಡ್, ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುವ ಗರ್ಭಾವಸ್ಥೆಯ ವಿಟಮಿನ್‌ ಗಳನ್ನು ತೆಗೆದುಕೊಳ್ಳಿ.
  • ದಿನವಿಡೀ ಸಾಕಷ್ಟು ನೀರನ್ನು ಕುಡಿಯುವ ಮೂಲಕ ಹೈಡ್ರೇಟೆಡ್ ಆಗಿರಿ.
  • ವಾಕರಿಕೆಯನ್ನು ಕಡಿಮೆ ಮಾಡಲು ಮತ್ತು ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಆಗಾಗ್ಗೆ ಸಣ್ಣ ಪ್ರಮಾಣದ ಊಟವನ್ನು ಸೇವಿಸಿ.
  • ಆರೋಗ್ಯಕರ ಗರ್ಭಧಾರಣೆಗಾಗಿ ಮದ್ಯ, ತಂಬಾಕು ಮತ್ತು ಕೆಫೀನ್ ಸೇವನೆಯನ್ನು ಮಿತಿಗೊಳಿಸಿ.

ಯಾವುದೇ ಹೊಸ ವ್ಯಾಯಾಮ ಪ್ರಕ್ರಿಯೆಯನ್ನು ಆರಂಭಿಸುವ ಮೊದಲು ಅಥವಾ ಆಹಾರದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಎರಡು ತಿಂಗಳ ಗರ್ಭಿಣಿಯಾಗಿರುವಾಗ ಪ್ರಮುಖ ವೈದ್ಯಕೀಯ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣೆಗಳು

ಎರಡು ತಿಂಗಳ ಗರ್ಭಧಾರಣೆಯ ಸಮಯದಲ್ಲಿ ಈ ಕೆಳಗಿನ ಪ್ರಮುಖ ವೈದ್ಯಕೀಯ ತಪಾಸಣೆಗಳು ಒಳಗೊಂಡಿರಬಹುದು:

· ಗರ್ಭಾವಸ್ಥೆಯ ಕುರಿತು ವೈದ್ಯರ ಜೊತೆ ಮೊದಲ ಭೇಟಿ: ಈ ಭೇಟಿಯಲ್ಲಿ ಸಾಮಾನ್ಯವಾಗಿ ಸಮಗ್ರ ಆರೋಗ್ಯ ಮೌಲ್ಯಮಾಪನವನ್ನು ಮಾಡಲಾಗುತ್ತದೆ, ಇದರಲ್ಲಿ ನಿಮ್ಮ ವೈದ್ಯಕೀಯ ಇತಿಹಾಸದ ಪರಿಶೀಲನೆ, ದೈಹಿಕ ತಪಾಸಣೆ ಮತ್ತು ಆರಂಭಿಕ ಪರೀಕ್ಷೆಗಳು ಸೇರಿರುತ್ತದೆ.

· ರಕ್ತ ಪರೀಕ್ಷೆಗಳು: ನಿಮ್ಮ ವೈದ್ಯರು ನಿಮ್ಮ ರಕ್ತದ ಗುಂಪು, ಆರ್ ಎಚ್ ಫ್ಯಾಕ್ಟರ್, ಹಿಮೋಗ್ಲೋಬಿನ್ ಮಟ್ಟಗಳನ್ನು ಪರಿಶೀಲಿಸುತ್ತಾರೆ ಮತ್ತು ಸೋಂಕುಗಳು ಅಥವಾ ರೋಗನಿರೋಧಕ ಶಕ್ತಿಯ ತಪಾಸಣೆ ಮಾಡುತ್ತಾರೆ.

· ಮೂತ್ರ ಪರೀಕ್ಷೆಗಳು: ಇವು ಮೂತ್ರನಾಳದ ಸೋಂಕುಗಳು, ಪ್ರೋಟೀನ್ ಮಟ್ಟಗಳು ಮತ್ತು ಇತರ ಸಂಭಾವ್ಯ ಸಮಸ್ಯೆಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತವೆ.

·  ಅಲ್ಟ್ರಾಸೌಂಡ್: ಸುಮಾರು 8 ವಾರಗಳಲ್ಲಿ ಅಲ್ಟ್ರಾಸೌಂಡ್ ಮಾಡಿದರೆ ಗರ್ಭಧಾರಣೆಯನ್ನು ದೃಢೀಕರಿಸಬಹುದು, ಬಹು ಗರ್ಭಾಶಯ ಇದೆಯೇ ಎಂಬುದನ್ನು ಪರಿಶೀಲಿಸಬಹುದು ಮತ್ತು ಅಂದಾಜು ಡೆಲಿವರಿ ಡೇಟ್ ಅನ್ನು ಲೆಕ್ಕ ಮಾಡಬಹುದು.

·  ಜನನಾಂಗ ತಪಾಸಣೆ: ಕೆಲವು ಕ್ರೋಮೋಸೋಮ್ ಅಸಹಜತೆಗಳ ಅಪಾಯವನ್ನು ಮೌಲ್ಯಮಾಪನ ಮಾಡಲು ಟ್ರಿಪಲ್ ಮಾರ್ಕರ್ ಟೆಸ್ಟ್, ಪ್ರೆಗಾ ಪ್ರೋ ಟೆಸ್ಟ್ ಅಥವಾ ಪ್ರೇಗಾ ಪ್ಲಸ್‌ ನಂತಹ ತಪಾಸಣೆ ಆಯ್ಕೆಗಳ ಕುರಿತು ನಿಮ್ಮ ವೈದ್ಯರು ಚರ್ಚಿಸಬಹುದು.

·  ಗರ್ಭಧಾರಣೆ ದೃಢೀಕರಣ: ಬೀಟಾ ಎಚ್ ಸಿ ಜಿ ಪರೀಕ್ಷೆ ಅಥವಾ ಮೂತ್ರ ಗರ್ಭಧಾರಣೆ ಪರೀಕ್ಷೆಯು ಗರ್ಭಧಾರಣೆಯ ಹಾರ್ಮೋನ್‌ ಇರುವ ಕುರಿತು ತಪಾಸಣೆ ಮಾಡಬಹುದು.

ಎರಡನೇ ತಿಂಗಳ ಗರ್ಭಿಣಿಯ ಆರೋಗ್ಯ ಪಾಲನೆಗೆ ಕೆಲವು ಸಲಹೆಗಳು

ನಿಮ್ಮ ಯೋಗಕ್ಷೇಮವನ್ನು ಪಾಲಿಸಲು ಸಹಾಯ ಮಾಡುವ ಕೆಲವು ಸಲಹೆಗಳು:

·  ಆರಂಭಿಕ ಗರ್ಭಾವಸ್ಥೆಯಲ್ಲಿ ಆಯಾಸ ಆಗುವುದು ಸಾಮಾನ್ಯ, ಆದ್ದರಿಂದ ನಿಮ್ಮ ದೇಹದ ಮಾತನ್ನು ಕೇಳಿ ಮತ್ತು ಅಗತ್ಯವಿರುವಾಗ ವಿಶ್ರಾಂತಿ ತೆಗೆದುಕೊಳ್ಳಿ ಅಥವಾ ನಿದ್ದೆ ಮಾಡಿ.

·  ಜೀರ್ಣಕ್ರಿಯೆಗೆ ಸುಲಭವಾದ, ಪೋಷಕಾಂಶ-ಸಮೃದ್ಧ ಆಹಾರಗಳನ್ನು ಆಯ್ಕೆಮಾಡಿ ಮತ್ತು ವಾಕರಿಕೆಯನ್ನು ತಡೆಗಟ್ಟಲು ಊಟವನ್ನು ತಪ್ಪಿಸಬೇಡಿ.

·  ಒತ್ತಡವನ್ನು ನಿರ್ವಹಿಸಲು ಮತ್ತು ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳಲು ದೀರ್ಘ ಉಸಿರಾಟ, ಧ್ಯಾನ ಅಥವಾ ಸೌಮ್ಯವಾಗಿ ಸ್ಟ್ರೆಚ್ ಮಾಡುವುದು ಮುಂತಾದ ರಿಲ್ಯಾಕ್ಸೇಷನ್ ವಿಧಾನಗಳಲ್ಲಿ ತೊಡಗಿಕೊಳ್ಳಿ.

·  ನಿಮ್ಮ ವೈದ್ಯರು ಒದಗಿಸಿದ ಮಾರ್ಗದರ್ಶನವನ್ನು ಅನುಸರಿಸಿ, ಮಿತವಾದ ದೈಹಿಕ ಚಟುವಟಿಕೆಯನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಿ.

·  ನಿಮ್ಮ ಬೆಳೆಯುತ್ತಿರುವ ಮಗುವಿಗೆ ತೊಂದರೆಯಾಗದಿರಲು ಮದ್ಯ, ತಂಬಾಕು ಮತ್ತು ರಾಸಾಯನಿಕಗಳಿಂದ ದೂರವಿರಿ.

ಈ ವಿಶೇಷ ಸಮಯದಲ್ಲಿ ವಿಶ್ವಾಸಾರ್ಹ ರೋಗನಿರ್ಣಯ ಸೇವೆಗಳು ಮತ್ತು ವೈಯಕ್ತಿಕ ಆರೈಕೆಯ ಅವಶ್ಯಕತೆ ಇರುತ್ತದೆ ಎಂಬುದನ್ನು ಮೆಟ್ರೋಪೊಲಿಸ್ ಹೆಲ್ತ್‌ ಕೇರ್‌ ನಲ್ಲಿ ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ತಜ್ಞ ಫ್ಲೆಬೊಟೊಮಿಸ್ಟ್‌ ಗಳ ತಂಡವು ಬೀಟಾ ಎಚ್ ಸಿ ಜಿ ಟೆಸ್ಟ್‌ ನಂತಹ ಅಗತ್ಯ ಗರ್ಭಧಾರಣೆಯ ಪರೀಕ್ಷೆ ನಡೆಸಲು ಅನುಕೂಲಕರವಾದ ಮನೆಯಲ್ಲಿಯೇ ಮಾದರಿ ಸಂಗ್ರಹಿಸುವ ಸೌಲಭ್ಯವನ್ನು ಒದಗಿಸುತ್ತಾರೆ. ಈ ಸೇವೆಯು ನಿಮಗೆ ಆರಾಮದಾಯಕತೆ ಮತ್ತು ಮಾನಸಿಕ ಶಾಂತಿಯನ್ನು ಒದಗಿಸುತ್ತದೆ. ನಮ್ಮ ಅತ್ಯಾಧುನಿಕ ಪ್ರಯೋಗಾಲಯಗಳು ಮತ್ತು ಬಳಕೆದಾರ ಸ್ನೇಹಿ ಮೆಟ್ರೋಪೊಲಿಸ್ ಟ್ರೂಹೆಲ್ತ್ ಆಪ್‌ ನೊಂದಿಗೆ, ನೀವು ನಿಮ್ಮ ಪರೀಕ್ಷಾ ಫಲಿತಾಂಶಗಳನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ಪಡೆಯಬಹುದು.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಎರಡು ತಿಂಗಳ ಗರ್ಭಿಣಿಯಾಗಿರುವಾಗ ಯಾವ ಭಾವನೆ ಇರುತ್ತದೆ?

ಎರಡು ತಿಂಗಳ ಗರ್ಭಿಣಿಯಾಗಿರುವಾಗ, ಹೆಚ್ಚಿನ ಮಹಿಳೆಯರು ಆಯಾಸ, ವಾಕರಿಕೆ, ಸ್ತನದ ನೋವು, ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಮನಸ್ಥಿತಿಯ ಏರಿಳಿತಗಳಂತಹ ಲಕ್ಷಣಗಳನ್ನು ಅನುಭವಿಸುತ್ತಾರೆ. ಕೆಲವರು ಸ್ವಲ್ಪ ಹೊಟ್ಟೆಯ ಉಬ್ಬರ ಅಥವಾ ಸೆಳೆತವನ್ನು ಅನುಭವಿಸಬಹುದು. ಆದರೆ, ಈ ಲಕ್ಷಣಗಳ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.

ಎರಡನೇ ತಿಂಗಳಲ್ಲಿ ಗರ್ಭಧಾರಣೆಯನ್ನು ಹೇಗೆ ದೃಢೀಕರಿಸುವುದು?

ಮನೆಯಲ್ಲಿಯೇ ಗರ್ಭಧಾರಣೆಯ ಪರೀಕ್ಷೆ ನಡೆಸುವ ಮೂಲಕ ಗರ್ಭಧಾರಣೆಯನ್ನು ಕಂಡುಹಿಡಿಯಬಹುದಾದರೂ, ವೈದ್ಯರು ಎರಡನೇ ತಿಂಗಳಲ್ಲಿ ಎಚ್ ಸಿ ಜಿ ಮಟ್ಟವನ್ನು ಅಳೆಯುವ ರಕ್ತ ಪರೀಕ್ಷೆಗಳು ಮತ್ತು ಟ್ರಾನ್ಸ್‌ ವಜೈನಲ್ ಅಲ್ಟ್ರಾಸೌಂಡ್ ಮೂಲಕ ಗರ್ಭಧಾರಣೆಯನ್ನು ದೃಢೀಕರಿಸುತ್ತಾರೆ. ಈ ವಿಧಾನಗಳು ಗರ್ಭಧಾರಣೆಯ ದಿನಾಂಕವನ್ನು ನಿಖರವಾಗಿ ನಿರ್ಧರಿಸಲು ಮತ್ತು ಭ್ರೂಣದ ಬೆಳವಣಿಗೆಯನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತವೆ.

ಎರಡು ತಿಂಗಳ ಗರ್ಭಿಣಿಯಾಗಿರುವಾಗ ಹೃದಯ ಬಡಿತವಿರುತ್ತದೆಯೇ?

ಹೌದು, ಎರಡನೇ ತಿಂಗಳ ಗರ್ಭಿಯಾಗಿರುವಾಗ, ಸಾಮಾನ್ಯವಾಗಿ 6 ರಿಂದ 7 ನೇ ವಾರದಲ್ಲಿ ಅಲ್ಟ್ರಾಸೌಂಡ್ ಮೂಲಕ ಮಗುವಿನ ಹೃದಯ ಬಡಿತವನ್ನು ಕೇಳಬಹುದು. ಈ ಹಂತವು ಗರ್ಭಿಣಿಯರಿಗೆ ಸಂತೋಷ ಮತ್ತು ಭರವಸೆಯನ್ನು ಒದಗಿಸುತ್ತದೆ.

ಎರಡು ತಿಂಗಳ ಗರ್ಭಿಣಿಯಾಗಿರುವಾಗ ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ಬರುತ್ತದೆಯೇ?

ಹೌದು, ಎರಡು ತಿಂಗಳ ಗರ್ಭಿಣಿಯಾಗಿರುವಾಗ, ಮೂತ್ರ ಮತ್ತು ರಕ್ತ ಗರ್ಭಧಾರಣೆಯ ಪರೀಕ್ಷೆಗಳು ಗರ್ಭಧಾರಣೆಯ ಹಾರ್ಮೋನ್ ಎಚ್ ಸಿ ಜಿಯ ಕಾರಣದಿಂದ ಧನಾತ್ಮಕ ಫಲಿತಾಂಶವನ್ನು ತೋರಿಸುವ ಸಾಧ್ಯತೆಯಿದೆ. ಈ ಹಂತದಲ್ಲಿ ಈ ಪರೀಕ್ಷೆಗಳು ವಿಶ್ವಾಸಾರ್ಹ ಸೂಚಕಗಳಾಗಿವೆ.

5 ವಾರಗಳ ಗರ್ಭಧಾರಣೆಯ ಲಕ್ಷಣಗಳು ಯಾವುವು?

5 ವಾರಗಳ ಗರ್ಭಿಣಿಯಾಗಿರುವಾಗ, ಸಾಮಾನ್ಯ ಲಕ್ಷಣಗಳೆಂದರೆ ಋತುಚಕ್ರ ಮಿಸ್ ಆಗುತ್ತದೆ, ವಾಕರಿಕೆ, ಸ್ತನದ ನೋವು, ಆಯಾಸ, ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಕೆಲವೊಮ್ಮೆ ಸೌಮ್ಯವಾದ ಸೆಳೆತ ಅಥವಾ ರಕ್ತದ ಕಲೆಗಳು ಕಾಣಿಸಬಹುದು. ಈ ಲಕ್ಷಣಗಳು ಹಾರ್ಮೋನ್ ಬದಲಾವಣೆಗಳಿಂದ ಮತ್ತು ಗರ್ಭಧಾರಣೆಗೆ ದೇಹದ ಹೊಂದಾಣಿಕೆಯಿಂದ ಉಂಟಾಗುತ್ತವೆ.

ಎರಡು ತಿಂಗಳ ಗರ್ಭಿಣಿಯಾಗಿರುವಾಗ ಗರ್ಭಿಣಿಯೆಂದು ಅನಿಸದಿರುವುದು ಸಾಮಾನ್ಯವೇ?

ಹೌದು, ಎರಡು ತಿಂಗಳ ಗರ್ಭಿಣಿಯಾಗಿರುವಾಗ ಕೆಲವು ಮಹಿಳೆಯರಿಗೆ ಗಮನಾರ್ಹ ಗರ್ಭಧಾರಣೆಯ ಲಕ್ಷಣಗಳು ಕಡಿಮೆ ಕಾಣಿಸಬಹುದು ಅಥವಾ ಕಾಣಿಸದಿರುವುದು ಸಂಪೂರ್ಣವಾಗಿ ಸಾಮಾನ್ಯವಾಗಿದೆ. ಅಲ್ಲದೇ ಲಕ್ಷಣಗಳು ವ್ಯಾಪಕವಾಗಿ ಬದಲಾಗುತ್ತದೆ ಮತ್ತು ಲಕ್ಷಣಗಳು ಕಾಣಿಸದಿದ್ದರೆ ಅದು ಸಮಸ್ಯೆಯನ್ನು ಸೂಚಿಸುವುದಿಲ್ಲ. ಆದರೆ, ನಿಮಗೆ ಯಾವುದೇ ಆತಂಕವಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Talk to our health advisor

Book Now

LEAVE A REPLY

Your email address will not be published. Required fields are marked *

Popular Tests

Choose from our frequently booked blood tests

TruHealth Packages

View More

Choose from our wide range of TruHealth Package and Health Checkups

View More