Language
ಪದ್ಮಾಸನ (ಕಮಲದ ಭಂಗಿ): ದೇಹ, ಮನಸ್ಸು ಮತ್ತು ಧ್ಯಾನಕ್ಕೆ ಪದ್ಮಾಸನದಿಂದಾಗುವ ಪ್ರಯೋಜನಗಳು
Table of Contents
ನೀವು ಆಗಾಗ ಚಂಚಲ ಭಾವ ಅಥವಾ ಒತ್ತಡವನ್ನು ಅನುಭವಿಸುತ್ತಿದ್ದೀರಾ? ಮನಃಶಾಂತಿ ಬೇಕು ಎಂದು ಬಯಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಪದ್ಮಾಸನ ಅಥವಾ ಕಮಲದ ಭಂಗಿ ಹೆಚ್ಚು ಸೂಕ್ತ. ಪದ್ಮಾಸನ ಹೆಚ್ಚು ಏಕಾಗ್ರ ಮನಸ್ಸು, ಶಾಂತ ಭಾವ ಉಂಟುಮಾಡುತ್ತದೆ ಮತ್ತು ನಿಮ್ಮ ಉಸಿರಾಟವನ್ನು ನಿಯಂತ್ರಿಸಿ ಶಾಂತ ಭಾವನೆಯನ್ನು ಒದಗಿಸುತ್ತದೆ. ಈ ಸೌಮ್ಯ, ಕುಳಿತುಕೊಳ್ಳುವ ಭಂಗಿಯು ನಿಮ್ಮ ದೇಹವನ್ನು ಆರಾಮಗೊಳಿಸುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಗಮನ ಕೇಂದ್ರೀಕರಿಸಲು ಮತ್ತು ವಿಶ್ರಾಂತಿ ಪಡೆಯುವುದನ್ನು ಸುಲಭವಾಗಿಸುತ್ತದೆ.
ಈ ಭಂಗಿಯ ನಿಯಮಿತ ಅಭ್ಯಾಸದ ಮೂಲಕ ನೀವು ಒತ್ತಡದಿಂದ ಮುಕ್ತರಾಗಬಹುದು, ಸುಧಾರಿತ ಭಂಗಿ ಮತ್ತು ಒಳಗಿನ ಶಕ್ತಿಯನ್ನು ಹೊಂದಬಹುದು. ಇದು ನಿಮ್ಮ ದೈನಂದಿನ ಜೀವನದಲ್ಲಿ ಶಾಂತಿಯನ್ನು ಹೊಂದಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಲು ಒಂದು ಸರಳ ಆದರೆ ಶಕ್ತಿಶಾಲಿ ಮಾರ್ಗವಾಗಿದೆ.
ಪದ್ಮಾಸನ (ಕಮಲದ ಭಂಗಿ) ಎಂದರೇನು?
ಪದ್ಮಾಸನ ಅಥವಾ ಕಮಲದ ಭಂಗಿ, ಸಾಂಪ್ರದಾಯಿಕ ಯೋಗದಲ್ಲಿ ಬೇರೂರಿರುವ ಒಂದು ಶಾಸ್ತ್ರೀಯವಾದ ಕುಳಿತ ಭಂಗಿಯಾಗಿದೆ. ಇದರಲ್ಲಿ ಕಾಲುಗಳನ್ನು ಮಡಚಿ, ಕಾಲುಗಳನ್ನು ತೊಡೆಯ ಮೇಲೆ ಇರಿಸಲಾಗುತ್ತದೆ. ಹೀಗೆ ಮಾಡಿದರೆ ಉಸಿರಾಟ ಅಥವಾ ಧ್ಯಾನಕ್ಕೆ ಸ್ಥಿರವಾದ ಆಧಾರವನ್ನು ಒದಗುತ್ತದೆ. ಈ ಭಂಗಿಯು ಎತ್ತರವಾಗಿ ಕುಳಿತುಕೊಳ್ಳಲು, ಉಸಿರಾಟವನ್ನು ಸ್ಥಿರಗೊಳಿಸಲು ಮತ್ತು ಗಮನ ಕೇಂದ್ರೀಕರಿಸಲು ನೆರವಾಗುತ್ತದೆ.
ಪ್ರಾಚೀನ ಯೋಗಾಭ್ಯಾಸಗಳಲ್ಲಿ ಒಂದಾಗಿರುವ ಪದ್ಮಾಸನವು ಶಾರೀರಿಕ ಸ್ಥಿರತೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಹೊಂದಲು ಉಪಯುಕ್ತ ಆಸನವಾಗಿದೆ. ಇದನ್ನು ಸಾಧಿಸಲು ಸಮಯ ತೆಗೆದುಕೊಳ್ಳಬಹುದಾದರೂ, ಅದರ ಸರಳತೆ ಮತ್ತು ತೀವ್ರತೆಯಿಂದ ಎಚ್ಚರಿಕೆಯಿಂದ ಅಭ್ಯಾಸ ಮಾಡಿದರೆ ದೀರ್ಘಕಾಲೀನ ಪ್ರಯೋಜನಗಳು ದೊರೆಯುತ್ತದೆ.
ಪದ್ಮಾಸನದ ವಿಧಗಳು
ಪದ್ಮಾಸನದ ಹಲವಾರು ರೂಪಗಳಿವೆ. ಪ್ರತಿಯೊಂದು ರೂಪವು ವಿಭಿನ್ನ ರೀತಿಯ ಹೊಂದಿಕೊಳ್ಳುವಿಕೆ ಮತ್ತು ಸೌಕರ್ಯಕ್ಕೆ ತಕ್ಕಂತೆ ರೂಪುಗೊಂಡಿವೆ. ನೀವು ಒಂದು ಸ್ವರೂಪವನ್ನು ಆಯ್ಕೆಮಾಡುವ ಮೊದಲು, ನಿಮ್ಮ ದೇಹವನ್ನು ಗಮನಿಸಿ ಮತ್ತು ಕೀಲುಗಳ ಮೇಲೆ ಒತ್ತಡ ಹೇರದಿರಿ. ಪದ್ಮಾಸನದ ಹಲವು ರೂಪಾಂತರಗಳು ಇಲ್ಲಿವೆ:
· ಪೂರ್ಣ ಪದ್ಮಾಸನ (ಕ್ಲಾಸಿಕ್ ಕಮಲದ ಭಂಗಿ): ಎರಡೂ ಕಾಲುಗಳನ್ನು ತೊಡೆಯ ಮೇಲೆ ಇರಿಸಲಾಗುತ್ತದೆ. ಇದಕ್ಕೆ ಸೊಂಟದ ಹೊಂದಿಕೊಳ್ಳುವಿಕೆ ಬೇಕು. ದೀರ್ಘಕಾಲ ಕುಳಿತ ಭಂಗಿಗಳಲ್ಲಿ ಆರಾಮದಾಯಕವಾಗಿರುವ ಅನುಭವಿಗಳಿಗೆ ಇದು ಸೂಕ್ತ.
· ಅರ್ಧ ಪದ್ಮಾಸನ (ಅರ್ಧ ಕಮಲದ ಭಂಗಿ): ಒಂದು ಕಾಲು ತೊಡೆಯ ಮೇಲೆ ಇದ್ದರೆ, ಇನ್ನೊಂದು ಕಾಲು ಮೊಣಕಾಲಿನ ಕೆಳಗೆ ಇರಿಸಲಾಗುತ್ತದೆ. ಆರಂಭಿಕರಿಗೆ ಅಥವಾ ಪದ್ಮಾಸನ ಸುಲಭವಾಗಿ ಹಾಕಲು ಬಯಸುವವರಿಗೆ ಇದು ಸೌಮ್ಯ ರೂಪಾಂತರವಾಗಿದೆ.
· ಸಿದ್ಧಾಸನ (ಸಾಧಿತ ಭಂಗಿ): ಸ್ವಲ್ಪ ಭಿನ್ನವಾದರೂ, ಇದನ್ನು ಕೆಲವೊಮ್ಮೆ ಪದ್ಮಾಸನದೊಂದಿಗೆ ಪರಸ್ಪರ ಬದಲಾಯಿಸಿಕೊಳ್ಳಲಾಗುತ್ತದೆ. ಒಂದು ಹಿಮ್ಮಡಿಯನ್ನು ಮೇಲ್ಮುಖವಾಗಿ ಇರಿಸಲಾಗುತ್ತದೆ ಮತ್ತು ಇನ್ನೊಂದನ್ನು ಅದರ ಮುಂದೆ ಹಿಮ್ಮಡಿ ಮೇಲೆ ಇರುವಂತೆ ಇರಿಸಲಾಗುತ್ತದೆ. ಬೆನ್ನುಹುರಿಯನ್ನು ನೇರವಾಗಿ ಇರಿಸುವಂತೆ ಮಾಡುತ್ತದೆ.
· ಸುಖಾಸನ (ಸುಲಭ ಭಂಗಿ): ಕಮಲದ ಭಂಗಿಗೆ ಕಾಲುಗಳನ್ನು ಮಡಚಲು ಕಷ್ಟವಾದವರಿಗೆ ಸರಳವಾದ ಕಾಲು ಮಡಚಿದ ಭಂಗಿ. ಮೊಣಕಾಲಿನ ಕೆಳಗೆ ಕುಶನ್‌ಗಳನ್ನು ಬಳಸಬಹುದು.
· ಕುರ್ಚಿಯ ರೂಪಾಂತರದಂತಿರುವ ಪದ್ಮಾಸನ: ಕೀಲು ಅಥವಾ ಸಮತೋಲನದ ಸಮಸ್ಯೆ ಇರುವವರಿಗೆ ಇದು ಸೂಕ್ತವಾಗಿದ್ದು, ಬೆನ್ನು ನೇರವಾಗಿರುವ ಕುರ್ಚಿಯಲ್ಲಿ ಕುಳಿತುಕೊಂಡು, ಕಾಲುಗಳನ್ನು ಸಮತಟ್ಟಾಗಿ ಇರಿಸಿ ಪದ್ಮಾಸನದ ಜೋಡಣೆಯನ್ನು ಅನುಕರಿಸಬಹುದು.
ಪ್ರತೀ ರೂಪವೂ ಭಂಗಿಯ ಸ್ಥಿರತೆ, ಘನತೆ ಮತ್ತು ಸಮತೋಲಿತತೆಗೆ ಪೂರಕವಾಗಿ ರೂಪಿಸಲಾಗಿದ್ದು, ನಿಮ್ಮ ದೇಹದ ಸ್ಥಿತಿಗೆ ತಕ್ಕಂತೆ ಸರಿಹೊಂದುತ್ತದೆ.
ಪದ್ಮಾಸನದ 13 ಶಾರೀರಿಕ ಪ್ರಯೋಜನಗಳು
ನಿಯಮಿತವಾಗಿ ಪದ್ಮಾಸನವನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಯೋಗಕ್ಷೇಮವನ್ನು ಪಾಲಿಸುವ ವಿವಿಧ ಶಾರೀರಿಕ ಪ್ರಯೋಜನಗಳು ದೊರೆಯುತ್ತವೆ:
1. ಭಂಗಿಯನ್ನು ಸುಧಾರಿಸುತ್ತದೆ: ಇದು ಬೆನ್ನುಹುರಿಯನ್ನು ನೇರವಾಗಿಡಲು ನೆರವಾಗುತ್ತದೆ, ತಲೆ, ಕುತ್ತಿಗೆ ಮತ್ತು ಬೆನ್ನನ್ನು ಸಹಜವಾಗಿ ಸರಿಹೊಂದಿಸುತ್ತದೆ.
2. ಬೆನ್ನುಹುರಿಯನ್ನು ಬಲಪಡಿಸುತ್ತದೆ: ಕಮಲದ ಭಂಗಿಯನ್ನು ಬಳಸುವುದರಿಂದ ಕಾಲಾನಂತರ ಬೆನ್ನುಹುರಿ ಮತ್ತು ಮಾಂಸಖಂಡಗಳ ಸಹಿಷ್ಣುತೆಯನ್ನು ಬೆಳೆಸುತ್ತದೆ.
3. ಕೀಲುಗಳ ಹೊಂದಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ: ಮೊಣಕಾಲು, ಪಾದದ ಗಂಟು ಮತ್ತು ಸೊಂಟಗಳು ಸ್ಥಿರವಾದ ಅಭ್ಯಾಸದಿಂದ ಹೆಚ್ಚು ಫ್ಲೆಕ್ಸಿಬಲ್ ಆಗುತ್ತವೆ.
4. ದೇಹದ ಕೆಳಭಾಗದ ಸ್ನಾಯುಗಳನ್ನು ಸ್ಟ್ರೆಚ್ ಮಾಡುತ್ತದೆ: ತೊಡೆ, ಕಾಲು ಮತ್ತು ಪೆಲ್ವಿಕ್ ಭಾಗವನ್ನು ಸ್ಟ್ರೆಚ್ ಮಾಡಿ ಮಸಲ್ ಟೋನ್ ಅನ್ನು ಸುಧಾರಿಸುತ್ತದೆ.
5. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ನೇರವಾಗಿ ಕುಳಿತು ಸ್ಥಿರವಾಗಿರುವುದರಿಂದ ಹೊಟ್ಟೆಯ ಸಂಕುಚನವನ್ನು ಕಡಿಮೆ ಮಾಡಿ, ಆರೋಗ್ಯಕರ ಜೀರ್ಣಕ್ರಿಯೆ ಆಗುವಂತೆ ಮಾಡುತ್ತದೆ.
6. ರಕ್ತಪರಿಚಲನೆಯನ್ನು ಬೆಂಬಲಿಸುತ್ತದೆ: ಕಮಲದ ಭಂಗಿಯಂತಹ ಸ್ಥಿರ ಕುಳಿತ ಭಂಗಿಯು ಸೊಂಟ ಮತ್ತು ಕಾಲುಗಳ ಸುತ್ತಲಿನ ರಕ್ತದ ಹರಿವನ್ನು ಕಾಪಾಡಲು ಸಹಾಯ ಮಾಡುತ್ತದೆ.
7. ಮುಟ್ಟಿನ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ: ಸೌಮ್ಯವಾಗಿ ಸೊಂಟ-ತೆರೆಯುವ ಕ್ರಿಯೆಯನ್ನು ತೀವ್ರವಲ್ಲದ ಹಂತಗಳಲ್ಲಿ ಎಚ್ಚರಿಕೆಯಿಂದ ಅಭ್ಯಾಸ ಮಾಡಿದರೆ ಒತ್ತಡ ಮತ್ತು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಬಹುದು.
8. ನರಮಂಡಲವನ್ನು ಶಾಂತಗೊಳಿಸುತ್ತದೆ: ಈ ಭಂಗಿಯು ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸಿ ವಿಶ್ರಾಂತಿಯನ್ನು ಹೊಂದಲು ನೆರವಾಗುತ್ತದೆ.
9. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ಅಧ್ಯಯನಗಳ ಪ್ರಕಾರ, ಪದ್ಮಾಸನವು ಒತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ಉತ್ತಮವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
10. ಸ್ನಾಯು ಒತ್ತಡವನ್ನು ಕಡಿಮೆ ಮಾಡುತ್ತದೆ: ಕಾಲಾನಂತರ ಸೊಂಟ ಮತ್ತು ಕಾಲುಗಳ ದೈಹಿಕ ಬಿಗಿತವನ್ನು ಬಿಡುಗಡೆ ಮಾಡಬಹುದು.
11. ಶ್ವಾಸಕೋಶದ ಕಾರ್ಯವನ್ನು ಬೆಂಬಲಿಸುತ್ತದೆ: ನೇರವಾದ ಬೆನ್ನುಹುರಿಯು ಉಸಿರಾಟದ ಸಾಮರ್ಥ್ಯವನ್ನು ಸುಧಾರಿಸುತ್ತದೆ, ಡಯಾಫ್ರಾಮ್ಯಾಟಿಕ್ ಉಸಿರಾಟದ ಮೂಲಕ ಆಮ್ಲಜನಕದ ಹರಿವನ್ನು ಉತ್ತಮಗೊಳಿಸುತ್ತದೆ.
12. ಪೆಲ್ವಿಕ್ ಆರೋಗ್ಯವನ್ನು ಉತ್ತಮಗೊಳಿಸುತ್ತದೆ: ಕಮಲದ ಭಂಗಿಯ ರಚನೆಯು ಪೆಲ್ವಿಕ್ ಫ್ಲೋರ್ ಮಸಲ್ ಗಳನ್ನು ತೊಡಗಿಸಿಕೊಂಡು, ಅವುಗಳ ಶಕ್ತಿ ಮತ್ತು ಸಮತೋಲನವನ್ನು ಉತ್ತಮಗೊಳಿಸುತ್ತದೆ.
13. ದೇಹದ ಜಾಗೃತಿಯನ್ನು ಬೆಳೆಸುತ್ತದೆ: ಪದ್ಮಾಸನದಲ್ಲಿ ಕುಳಿತುಕೊಳ್ಳುವುದು ನಿಮ್ಮ ದೇಹದ ಜೋಡಣೆ, ಒತ್ತಡ ಮತ್ತು ಸ್ಥಿರತೆಯನ್ನು ಉತ್ತಮಗೊಳಿಸುತ್ತದೆ.
ಈ ಪದ್ಮಾಸನದ ಪ್ರಯೋಜನಗಳು ತಾಳ್ಮೆಯಿಂದ, ನಿಯಮಿತ ಅಭ್ಯಾಸದ ಮೂಲಕ ಉತ್ತಮವಾಗಿ ದೊರೆಯುತ್ತವೆ. ಹಾಗಾಗಿ ಒತ್ತಡದಿಂದ ಪದ್ಮಾಸನ ಮಾಡದಿರಿ ಮತ್ತು ನಿಮ್ಮ ಮಿತಿಗಳನ್ನು ಅರಿತುಕೊಳ್ಳಿ.
ಪದ್ಮಾಸನದ ಮುದ್ರೆಗಳು (ಕಮಲದ ಭಂಗಿ)
ಧ್ಯಾನ ಮತ್ತು ಗುಣಪಡಿಸುವಿಕೆಯ ತೀವ್ರತೆಯನ್ನು ಹೆಚ್ಚಿಸುವ ವಿವಿಧ ಮುದ್ರೆಗಳನ್ನು (ಕೈ ಚಲನೆಗಳು) ಅಭ್ಯಾಸ ಮಾಡಲು ಪದ್ಮಾಸನವನ್ನು ಆಧಾರವಾಗಿ ಬಳಸಲಾಗುತ್ತದೆ. ಮುದ್ರೆಗಳು ಶಕ್ತಿಯನ್ನು ನಿರ್ದೇಶಿಸಲು ಮತ್ತು ಗಮನವನ್ನು ತೀವ್ರಗೊಳಿಸಲು ಸಹಾಯ ಮಾಡುತ್ತವೆ.
ಕಮಲದ ಭಂಗಿಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ಕೆಲವು ಮುದ್ರೆಗಳು:
· ಜ್ಞಾನ ಮುದ್ರೆ (ಜ್ಞಾನದ ಮುದ್ರೆ): ತೋರುಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಗೆ ಮುಟ್ಟಿಸಿ, ಇತರ ಬೆರಳುಗಳನ್ನು ಬಿಡಿಸಿಡಿ. ಶಾಂತತೆ, ಗಮನ ಮತ್ತು ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ.
· ಚಿನ್ ಮುದ್ರೆ (ಚೇತನದ ಮುದ್ರೆ): ಜ್ಞಾನ ಮುದ್ರೆಗೆ ಸಮಾನವಾದರೂ, ಅಂಗೈ ಕೆಳಮುಖವಾಗಿರುತ್ತದೆ. ಉಸಿರಾಟದ ಅಭ್ಯಾಸಗಳ ಸಮಯದಲ್ಲಿ ಬಳಸಲಾಗುತ್ತದೆ.
· ಧ್ಯಾನ ಮುದ್ರೆ (ಧ್ಯಾನದ ಮುದ್ರೆ): ಎರಡೂ ಕೈಗಳನ್ನು ಮಡಿಲಿನಲ್ಲಿ ಒಂದರ ಮೇಲೊಂದು ಇರಿಸಲಾಗುತ್ತದೆ, ಅಂಗೈ ಮೇಲ್ಮುಖವಾಗಿರುತ್ತದೆ. ಹೆಬ್ಬೆರಳುಗಳ ತುದಿಗಳು ಮುಟ್ಟಿಕೊಳ್ಳುತ್ತವೆ. ಒಳಗಿನ ಸ್ಥಿರತೆ ಮತ್ತು ಗಮನವನ್ನು ಹೆಚ್ಚಿಸುತ್ತದೆ.
· ಅಂಜಲಿ ಮುದ್ರೆ (ಪ್ರಾರ್ಥನೆಯ ಮುದ್ರೆ): ಹೃದಯದ ಮುಂದೆ ಅಂಗೈಗಳನ್ನು ಒಟ್ಟಿಗೆ ಒತ್ತಿ ಹಿಡಿದುಕೊಳ್ಳಲಾಗುತ್ತದೆ. ವಿನಯ ಮತ್ತು ಶಕ್ತಿಯ ಸಮತೋಲನವನ್ನು ಹೆಚ್ಚಿಸುತ್ತದೆ.
· ಅಭಯ ಮುದ್ರೆ (ನಿರ್ಭಯತೆಯ ಮುದ್ರೆ): ಒಂದು ಕೈಯನ್ನು ಎತ್ತಬೇಕು, ಅಂಗೈ ಹೊರಮುಖವಾಗಿರುತ್ತದೆ, ಧ್ಯಾನದ ಸಮಯದಲ್ಲಿ ಶಾಂತಿ ಮತ್ತು ರಕ್ಷಣೆಯನ್ನು ಸಂಕೇತಿಸುತ್ತದೆ.
ಪದ್ಮಾಸನದಲ್ಲಿ ಬಳಸಿದಾಗ, ಈ ಮುದ್ರೆಗಳು ನಿಮಗೆ ತಾಳ್ಮೆಯಿಂದಿರಲು, ಏಕಾಗ್ರತೆಯಿಂದಿರಲು ಮತ್ತು ಸಮತೋಲನ ಹೊಂದಲು ಸಹಾಯ ಮಾಡುತ್ತವೆ.
ಪದ್ಮಾಸನವನ್ನು ಸರಿಯಾಗಿ ಅಭ್ಯಾಸ ಮಾಡಲು ಸಹಾಯಮಾಡುವ ಸಲಹೆಗಳು
ಎಚ್ಚರಿಕೆಯಿಂದ ಮತ್ತು ಕಾಳಜಿಯಿಂದ ಪದ್ಮಾಸನವನ್ನು ಅಭ್ಯಾಸ ಮಾಡುವುದರಿಂದ ಶಾಂತಿ ದೊರೆಯುತ್ತದೆ ಮತ್ತು ಗಾಯ ಆಗುವುದನ್ನು ತಡೆಯುತ್ತದೆ. ಇದನ್ನು ಹೇಗೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ:
· ಮೊದಲು ಸೊಂಟವನ್ನು ಸಿದ್ಧಗೊಳಿಸಿ: ಬಟರ್‌ಫ್ಲೈ ಭಂಗಿ ಅಥವಾ ಪಿಜಿಯನ್ ಭಂಗಿಯಂತಹ ಸೌಮ್ಯ ಸೊಂಟ-ತೆರೆಯುವ ಭಂಗಿಗಳನ್ನು ಮಾಡುವುದರಿಂದ ಕೀಲುಗಳನ್ನು ಕಮಲದ ಭಂಗಿಗೆ ಸಿದ್ಧಗೊಳಿಸುತ್ತವೆ.
· ಅರ್ಧ ಪದ್ಮಾಸನದಿಂದ ಪ್ರಾರಂಭಿಸಿ: ಕ್ರಮೇಣ ನಿಧಾನವಾಗಿ ಆರಂಭಿಸಿ. ಒಂದು ಕಾಲನ್ನು ತೊಡೆಯ ಮೇಲೆ ಇರಿಸಿ ಮತ್ತು ಇನ್ನೊಂದನ್ನು ಮೊಣಕಾಲಿನ ಕೆಳಗೆ ಇರಿಸಿ.
· ಬೇಕಾದರೆ ನೆರವಿಗೆ ವಸ್ತುಗಳನ್ನು ಬಳಸಿ: ಸೊಂಟ ಅಥವಾ ಮೊಣಕಾಲಿನ ಕೆಳಗೆ ಕುಶನ್ ಗಳನ್ನು ಇಟ್ಟರೆ ಸುಭವಾಗುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತವೆ.
· ಬೆನ್ನುಹುರಿಯನ್ನು ನೇರವಾಗಿಡಿ: ಬೆನ್ನನ್ನು ನೇರವಾಗಿ ಇಟ್ಟುಕೊಳ್ಳು. ಬೆನ್ನನ್ನು ಬಾಗಿಸುವಂತೆ ಮಾಡದಿರಿ.
· ಮೊಣಕಾಲುಗಳನ್ನು ಒತ್ತಾಯಪೂರ್ವಕವಾಗಿ ಕೆಳಗಿಳಿಸಬೇಡಿ: ಕಾಲುಗಳನ್ನು ಸಹಜವಾಗಿ ಕೆಳಗಿಳಿಯಲು ಬಿಡಿ. ಒತ್ತಾಯ ಮಾಡುವುದರಿಂದ ಕೀಲು ಒತ್ತಡಕ್ಕೆ ಕಾರಣವಾಗಬಹುದು.
· ಕಾಲುಗಳನ್ನು ನಿಯಮಿತವಾಗಿ ಬದಲಾಯಿಸಿ: ಸೊಂಟ ಮತ್ತು ಕೀಲುಗಳಲ್ಲಿ ಅಸಮತೋಲನವನ್ನು ತಡೆಯಲು ಕಾಲನ್ನು ಬದಲಾಯಿಸಿರಿ.
· ಮೃದುವಾದ ಮೇಲ್ಮೈಯಲ್ಲಿ ಅಭ್ಯಾಸ ಮಾಡಿ: ಯೋಗ ಮ್ಯಾಟ್ ಅಥವಾ ಮಡಚಿದ ಕಂಬಳಿಯ ಮೇಲೆ ಕೂತಿರಿ ಮತ್ತು ಅದು ಮೊಣಕಾಲುಗಳನ್ನು ರಕ್ಷಿಸುತ್ತದೆ.
ನಿಮ್ಮ ಅಭ್ಯಾಸದಲ್ಲಿ ಸಣ್ಣ, ಸ್ಥಿರ ಪ್ರಯತ್ನಗಳಿದ್ದರೆ ಪದ್ಮಾಸನ ಯೋಗದಲ್ಲಿ ಅರ್ಥಪೂರ್ಣ ಪ್ರಗತಿಗೆ ದೊರೆಯುತ್ತವೆ.
ಪದ್ಮಾಸನ ಮಾಡಲು ಕೆಲವು ಸಲಹೆಗಳು
ನಿಮ್ಮ ಪದ್ಮಾಸನ ಅಭ್ಯಾಸವನ್ನು ಉತ್ತಮಗೊಳಿಸಲು ಈ ಪ್ರಾಯೋಗಿಕ ಸಲಹೆಗಳು ಸಹಾಯ ಮಾಡಬಹುದು:
· ನಿರಂತರವಾಗಿ ಮಾಡಿ, ಒತ್ತಡದಿಂದ ಮಾಡಬೇಡಿ: ದಿನಕ್ಕೆ ಕೆಲವು ನಿಮಿಷಗಳಾದರೂ ನಿಯಮಿತ ಅಭ್ಯಾಸ ಮಾಡಿ. ಒತ್ತಾಯವಾಗಿ ಮಾಡುವುದು ಬೇಡ.
· ನಿಮ್ಮ ದೇಹದ ಮಿತಿ ತಿಳಿದುಕೊಂಡು ಗೌರವಿಸಿ: ಮೊಣಕಾಲಿನ ನೋವು ಉಂಟಾದರೆ, ವಿರಾಮ ತೆಗೆದುಕೊಳ್ಳಿ ಮತ್ತು ಸ್ವಲ್ಪ ಬದಲಾವಣೆ ಮಾಡಿ.
· ನಿಮ್ಮ ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಿ: ಸ್ಥಿರವಾದ ಉಸಿರಾಟವು ಶಾಂತತೆಯನ್ನು ಉಂಟು ಮಾಡುತ್ತದೆ ಮತ್ತು ಕಮಲದ ಭಂಗಿಯ ಧ್ಯಾನದ ಗುಣವನ್ನು ಹೆಚ್ಚಿಸುತ್ತದೆ.
· ಕನ್ನಡಿಯನ್ನು ಅಥವಾ ಶಿಕ್ಷಕರ ಮಾರ್ಗದರ್ಶನವನ್ನು ಬಳಸಿ: ನಿಮ್ಮ ಭಂಗಿಯನ್ನು ಗಮನಿಸುವುದು ಅಸಮತೋಲನವನ್ನು ಆರಂಭದಲ್ಲಿಯೇ ಸರಿಪಡಿಸಲು ಸಹಾಯ ಮಾಡುತ್ತದೆ.
· ಅತಿಯಾಗಿ ಸ್ಟ್ರೆಚ್ ಮಾಡುವುದನ್ನು ತಪ್ಪಿಸಿ: ಒತ್ತಡವಾಗದಂತೆ ಸ್ಟ್ರೆಚ್ ಮಾಡಿ, ತೀಕ್ಷ್ಣವಾದ ನೋವು ಆಗುವವರೆಗೆ ಸ್ಟ್ರೆಚ್ ಮಾಡದಿರಿ. ಬೇಕಾದರೆ ವಸ್ತುಗಳನ್ನು ಬಳಸಿ.
· ಮುಖ ಮತ್ತು ಭುಜಗಳನ್ನು ರಿಲ್ಯಾಕ್ಸ್ ಆಗಿಡಿ: ಮೇಲ್ಭಾಗದ ದೇಹದಲ್ಲಿ ಒತ್ತಡ ಉಂಟಾದರೆ ಪದ್ಮಾಸನದ ಪ್ರಯೋಜನಗಳನ್ನು ತಡೆಯಬಹುದು.
· ‘ಪರಿಪೂರ್ಣ’ ಭಂಗಿಯ ಆಲೋಚನೆಯನ್ನು ಬಿಡಿ: ಪ್ರತಿಯೊಬ್ಬರ ಶರೀರವೂ ವಿಶಿಷ್ಟವಾಗಿದೆ. ಅನುಕೂಲತೆಗೆ ಮತ್ತು ಮಾನಸಿಕ ಶಾಂತಿಗೆ ಆದ್ಯತೆ ನೀಡಿ.
ಈ ಸಲಹೆಗಳನ್ನು ಅನುಸರಿಸುವುದರಿಂದ ಹೆಚ್ಚು ಆತ್ಮವಿಶ್ವಾಸದಿಂದ ಪದ್ಮಾಸನವನ್ನು ಮಾಡಬಹುದು.
ಪದ್ಮಾಸನದ ಎಚ್ಚರಿಕೆಗಳು ಮತ್ತು ವಿರೋಧಾಭಾಸಗಳು
ಪದ್ಮಾಸನವು ಉತ್ತಮ ಪ್ರಯೋಜನಗಳನ್ನು ನೀಡಿದರೂ, ಕೆಲವು ಆರೋಗ್ಯ ಸಮಸ್ಯೆಗಳಿದ್ದರೆ ಎಚ್ಚರಿಕೆಯಿಂದ ಅಭ್ಯಾಸ ಮಾಡುವುದು ಮುಖ್ಯ:
· ಮೊಣಕಾಲಿನ ನೋವು ಅಥವಾ ದೈಹಿಕ ನೋವು: ಮೊಣಕಾಲಿನ ಶಸ್ತ್ರಚಿಕಿತ್ಸೆಯಾಗಿದ್ದರೆ ಅಥವಾ ಕೀಲು ನೋವು ಇದ್ದರೆ ಕಮಲದ ಭಂಗಿಯನ್ನು ತಪ್ಪಿಸಿ. ಸುಖಾಸನದಂತಹ ಪರ್ಯಾಯಗಳನ್ನು ಬಳಸಿ.
· ಸೊಂಟ ಅಥವಾ ಗಂಟು ಗಟ್ಟಿಯಾಗಿರುವುದು: ಸೊಂಟ ಸೀಮಿತ ಹೊಂದಿಕೊಳ್ಳುವಿಕೆ ಇದ್ದರೆ ಪೂರ್ಣ ಪದ್ಮಾಸನ ಮಾಡುವುದು ತೊಂದರೆ ಆಗಬಹುದು. ಹಾಗಾಗಿ ಅರ್ಧ ಪದ್ಮಾಸನವನ್ನು ಪ್ರಯತ್ನಿಸಿ ಅಥವಾ ಬೆಂಬಲಕ್ಕೆ ವಸ್ತುಗಳನ್ನು ಬಳಸಿ.
· ಗರ್ಭಾವಸ್ಥೆ (ವಿಶೇಷವಾಗಿ ಕೊನೆಯ ಹಂತಗಳಲ್ಲಿ): ವೃತ್ತಿಪರ ಮಾರ್ಗದರ್ಶನದಲ್ಲಿ ಮಾತ್ರ ಅಭ್ಯಾಸ ಮಾಡಿ. ಸೌಮ್ಯವಾಗಿ ಕುಳಿತುಕೊಳ್ಳುವ ಭಂಗಿಗಳು ಈ ಸಮಯದಲ್ಲಿ ಆದ್ಯತೆಯಾಗಿರಲಿ.
· ಸಯಾಟಿಕಾ ಅಥವಾ ನರ ಸಂವೇದನೆ: ಈ ಭಂಗಿಯಲ್ಲಿ ದೀರ್ಘಕಾಲ ಕುಳಿತಿರುವುದು ನರಗಳನ್ನು ಸಂಕುಚಿತಗೊಳಿಸಬಹುದು. ವಿರಾಮಗಳನ್ನು ತೆಗೆದುಕೊಳ್ಳಿ ಅಥವಾ ಸೊಂಟವನ್ನು ಎತ್ತರದಲ್ಲಿರಿಸಲು ಕುಶನ್‌ನಲ್ಲಿ ಕುಳಿತುಕೊಳ್ಳಿ.
· ರಕ್ತಪರಿಚಲನೆ ಸಮಸ್ಯೆಗಳು: ಕಾಲುಗಳು ಬೇಗ ಜಡವಾದರೆ ಅಥವಾ ರಕ್ತಪರಿಚಲನೆಯ ಸಮಸ್ಯೆಗಳಿದ್ದರೆ, ಪದ್ಮಾಸನದಲ್ಲಿ ಕಳೆಯುವ ಸಮಯವನ್ನು ಕಡಿಮೆ ಮಾಡಿ.
· ಕೆಳಗಿನ ಕಾಲುಗಳಲ್ಲಿ ಸಂಧಿವಾತ: ಕೀಲುಗಳ ಮೇಲಿನ ಒತ್ತಡವು ಉರಿಯೂತ ಅಥವಾ ನೋವನ್ನು ಉಲ್ಬಣಗೊಳಿಸಬಹುದು. ಮೊದಲು ವೈದ್ಯಕೀಯ ತಜ್ಞರನ್ನು ಸಂಪರ್ಕಿಸಿ.
· ಕೆಳಗಿನ ಬೆನ್ನಿನ ಶಸ್ತ್ರಚಿಕಿತ್ಸೆಯಿಂದ ಚೇತರಿಕೆ: ವೈದ್ಯರಿಂದ ಅನುಮತಿ ಪಡೆಯದವರೆಗೆ ಪದ್ಮಾಸನವನ್ನು ಪ್ರಯತ್ನಿಸಬೇಡಿ.
ಯಾವಾಗಲೂ ನಿಮ್ಮ ದೇಹವನ್ನು ಗಮನಿಸಿ. ಒಳ್ಳೆಯದೆನಿಸದಿದ್ದರೆ ಪದ್ಮಾಸನವನ್ನು ಮಾರ್ಪಡಿಸಿ ಅಥವಾ ಬಿಟ್ಟುಬಿಡಿ. ಎಚ್ಚರಿಕೆಯಿಂದ ಅಭ್ಯಾಸ ಮಾಡುವುದರಿಂದ ನಿಮ್ಮ ದೇಹವನ್ನು ಸುರಕ್ಷಿತವಾಗಿರಿಸಬಹುದು.
ಪದ್ಮಾಸನವನ್ನು ಯಾರು ಅಭ್ಯಾಸ ಮಾಡಬೇಕು?
ಪದ್ಮಾಸನವು ಅನೇಕರಿಗೆ ಪ್ರಯೋಜನಕಾರಿಯಾಗಿದೆ, ಆದರೆ ಈ ಕೆಳಗಿನವರಿಗೆ ವಿಶೇಷವಾಗಿ ಸಹಾಯಕ:
· ಧ್ಯಾನ ಅಭ್ಯಾಸಿಗಳು: ಉಸಿರಾಟವನ್ನು ತೀವ್ರಗೊಳಿಸಲು ಮತ್ತು ಗಮನವನ್ನು ಕೇಂದ್ರೀಕರಿಸಲು ಬಯಸುವವರಿಗೆ, ಕಮಲದ ಭಂಗಿಯು ಸ್ಥಿರವಾದ ನೆರವನ್ನು ಒದಗಿಸುತ್ತದೆ.
· ಒತ್ತಡ ರಿಲೀಫ್ ಬಯಸುವವರು: ಪದ್ಮಾಸನದ ಶಾಂತಗೊಳಿಸುವ ಸ್ವಭಾವವು ಆತಂಕ ಮತ್ತು ಚಂಚಲತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
· ಡೆಸ್ಕ್ ಕೆಲಸಗಾರರು ಮತ್ತು ವಿದ್ಯಾರ್ಥಿಗಳು: ಪದ್ಮಾಸನವನ್ನು ಅಭ್ಯಾಸ ಮಾಡುವುದು ಕಳಪೆ ಭಂಗಿಯನ್ನು ಸರಿಪಡಿಸುತ್ತದೆ ಮತ್ತು ದೀರ್ಘಕಾಲ ಕುಳಿತಿರುವುದರಿಂದ ಉಂಟಾಗುವ ಒತ್ತಡವನ್ನು ಬಿಡುಗಡೆ ಮಾಡುತ್ತದೆ.
· ಹಿರಿಯ ನಾಗರಿಕರು (ಮಾರ್ಪಾಡುಗಳೊಂದಿಗೆ): ಸೌಮ್ಯವಾಗಿ ಮತ್ತು ಪ್ರಾಪ್ಸ್ ನೊಂದಿಗೆ ಮಾಡಿದಾಗ, ಇದು ಕೀಲುಗಳ ಚಲನಾತ್ಮಕತೆಯನ್ನು ಮತ್ತು ಶಾಂತತೆಯನ್ನು ಒದಗಿಸುತ್ತದೆ.
· ಯೋಗ ಕಲಿಕೆಯ ಆರಂಭಿಕ ಹಂತದಲ್ಲಿರುವವರು: ಅರ್ಧ ಪದ್ಮಾಸನದಂತಹ ಸುಲಭ ರೂಪಗಳಿಂದ ಆರಂಭಿಸಬಹುದು ಅಥವಾ ಬೆಂಬಲವಾಗಿ ದಿಂಬುಗಳನ್ನು ಬಳಸಬಹುದು.
· ಸಾಮರ್ಥ್ಯವನ್ನು ಸುಧಾರಿಸಲು ಬಯಸುವವರು: ನಿಯಮಿತ ಅಭ್ಯಾಸದಿಂದ ಗಟ್ಟಿಯಾದ ಸೊಂಟ ಮತ್ತು ಕಾಲಿನ ಗಂಟು ಭಾಗಗಳನ್ನು ಕಾಲಕ್ರಮೇಣ ಸೌಮ್ಯವಾಗಿ ಮಾಡಬಹುದು.
ನೀವು ಸ್ಥಿರವಾಗಿ ಮತ್ತು ಎಚ್ಚರಿಕೆಯಿಂದ ಅಭ್ಯಾಸ ಮಾಡಿದರೆ ಪದ್ಮಾಸನವು ನಿಮ್ಮ ಅನುಭವದ ಮಟ್ಟವನ್ನು ಲೆಕ್ಕಿಸದೆ ನಿಮ್ಮ ದೈಹಿಕ ಸೌಕರ್ಯ ಮತ್ತು ಮಾನಸಿಕ ಸ್ಥಿರತೆಯನ್ನು ಸುಧಾರಿಸುತ್ತದೆ.
ಕೊನೆಯ ಮಾತು
ನಿಯಮಿತವಾಗಿ ಪದ್ಮಾಸನವನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ದೇಹಕ್ಕೆ ಅನುಕೂಲವಾಗುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಧ್ಯಾನದ ಅನುಭವವನ್ನು ತೀವ್ರಗೊಳಿಸುತ್ತದೆ. ಇದು ಭಂಗಿ, ಸಾಮರ್ಥ್ಯ ಮತ್ತು ಶಾಂತಿಯನ್ನು ಹೆಚ್ಚಿಸುತ್ತದೆ. ಎಚ್ಚರಿಕೆಯಿಂದ ಮತ್ತು ಸ್ಥಿರವಾಗಿ ಮಾಡಿದಾಗ ದೀರ್ಘಕಾಲೀನ ಪ್ರಯೋಜನಗಳನ್ನು ನೀಡುತ್ತದೆ.
ಒಟ್ಟಾರೆ ಆರೋಗ್ಯ ಹೊಂದಲು ನಿಮ್ಮ ಆಂತರ್ಯದ ಆರೋಗ್ಯವನ್ನು ಗಮನಿಸುವುದು ಒಳ್ಳೆಯದು. ಅದಕ್ಕೆ ವಿಶ್ವಾಸಾರ್ಹ ರೋಗನಿರ್ಣಯ ಸೇವೆ ಒದಗಿಸುವ ಮೆಟ್ರೋಪೊಲಿಸ್ ಹೆಲ್ತ್ ಕೇರ್ ನೆರವಾಗುತ್ತದೆ. ನಿಮ್ಮ ಅಗತ್ಯಗಳಿಗೆ ತಕ್ಕಂತೆ ವಿಶ್ವಾಸಾರ್ಹ ಆರೋಗ್ಯ ತಪಾಸಣೆ ಮತ್ತು ಮನೆಯಲ್ಲಿ ಪರೀಕ್ಷೆ ಸೇವೆ ಒದಗಿಸಿ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮಲಬದ್ಧತೆಯಿಂದ ಸತತವಾಗಿ ತೊಂದರೆಯಾಗುತ್ತಿದೆಯೇ? ಈ ಸರಳ ಯೋಗ ಭಂಗಿಗಳಿಂದ ನೆಮ್ಮದಿ ಪಡೆಯಿರಿ
ಪದೇ ಪದೇ ಕೇಳಲಾದ ಪ್ರಶ್ನೆಗಳು
ಪದ್ಮಾಸನದಿಂದ ಯಾವ ರೋಗ ಗುಣವಾಗುತ್ತದೆ?
ಪದ್ಮಾಸನವು ಒತ್ತಡ-ಸಂಬಂಧಿತ ಸಮಸ್ಯೆಗಳನ್ನು ನಿರ್ವಹಿಸಲು, ಉತ್ತಮ ಜೀರ್ಣಕ್ರಿಯೆಯನ್ನು ಉಂಟು ಮಾಡಲು ಮತ್ತು ನರಮಂಡಲವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಆದರೆ ಯಾವುದೇ ನಿರ್ದಿಷ್ಟ ರೋಗವನ್ನು ನೇರವಾಗಿ ಗುಣಪಡಿಸುವುದಿಲ್ಲ.
ಪದ್ಮಾಸನವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದೇ?
ಪದ್ಮಾಸನವು ಉತ್ತಮ ಜೀರ್ಣಕ್ರಿಯೆ ಮತ್ತು ಭಂಗಿಯನ್ನು ಬೆಂಬಲಿಸುತ್ತದೆ, ಆದರೆ ಏಕಾಂಗಿಯಾಗಿ ಕೊಬ್ಬನ್ನು ಕರಗಿಸುವುದಿಲ್ಲ. ಉಸಿರಾಟದ ಅಭ್ಯಾಸ ಮತ್ತು ಚಲನೆಯೊಂದಿಗೆ ಸಂಯೋಜಿಸಿದಾಗ, ಇದು ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡಬಹುದು.
ಪದ್ಮಾಸನ ಮಾಡಲು ಕನಿಷ್ಠ ಸಮಯ ಎಷ್ಟು?
ನೀವು 1-2 ನಿಮಿಷಗಳಿಂದ ಪದ್ಮಾಸನ ಅಭ್ಯಾಸ ಆರಂಭಿಸಬಹುದು ಮತ್ತು ಸಾಮರ್ಥ್ಯ ಸುಧಾರಿಸಿದಂತೆ ಮತ್ತು ಸಾಮರ್ಥ್ಯವು ಸುರಕ್ಷಿತವಾಗಿ ಹೆಚ್ಚಿದಂತೆ ಕ್ರಮೇಣ ಸಮಯ ಹೆಚ್ಚಿಸಬಹುದು.
ಪದ್ಮಾಸನವು ಯಾವ ರೋಗಗಳನ್ನು ಗುಣಪಡಿಸಬಹುದು?
ಪದ್ಮಾಸನವು ಆತಂಕ, ಜೀರ್ಣಕ್ರಿಯೆಯ ತೊಂದರೆ ಅಥವಾ ಆಯಾಸದ ಲಕ್ಷಣಗಳನ್ನು ಶಮನಗೊಳಿಸಬಹುದು, ಆದರೆ ಯಾವುದೇ ರೋಗಕ್ಕೆ ವೈದ್ಯಕೀಯ ಚಿಕಿತ್ಸೆಯ ಬದಲಾಗಿ ಇದನ್ನು ಬಳಸಬಾರದು.
ಮಂಡಿಗಳಿಗಾಗಿ ಪದ್ಮಾಸನವನ್ನು ಮಾಡಬಹುದೇ?
ನಿಮ್ಮ ಮಂಡಿಗಳು ಆರೋಗ್ಯವಾಗಿದ್ದರೆ, ಪದ್ಮಾಸನವು ಕೀಲುಗಳನ್ನು ಬಲಪಡಿಸುತ್ತದೆ ಮತ್ತು ಸ್ಥಿರಗೊಳಿಸುತ್ತದೆ. ಆದರೆ, ಮಂಡಿಯ ನೋವು, ಗಾಯ ಅಥವಾ ಗಟ್ಟಿತನವಿದ್ದರೆ ಇದನ್ನು ತಪ್ಪಿಸಿ.









